ಮಂಗಳೂರು: ಮನೆಯಲ್ಲಿ ಅಕ್ರಮ ಕಸಾಯಿಖಾನೆ: ಪೊಲೀಸ್ ದಾಳಿ, ಆರೋಪಿ ಮತ್ತು 95 ಕೆ.ಜಿ ಮಾಂಸ ವಶಕ್ಕೆ
ಮಂಗಳೂರು: ನಗರ ಹೊರವಲಯದ ಅರ್ಕುಳದಲ್ಲಿ ಮನೆಯಲ್ಲೇ ದನ ಕಡಿದು ಮಾಂಸ ಮಾಡುತ್ತಿದ್ದಾಗ ಕಂಕನಾಡಿ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದು ಮನೆ ಮಾಲೀಕ ಸಾಬಿತ್(40) ಎಂಬಾತನನ್ನು ಬಂಧಿಸಿದ್ದಾರೆ.
ಮನೆಯ ಬಳಿಯ ಶೆಡ್ ಒಂದರಲ್ಲಿ ಸಾಬಿತ್ ಮತ್ತು ಇನ್ನೊಬ್ಬ ಬಶೀರ್ ಮಾಂಸ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು 95 ಕೇಜಿ ದನದ ಮಾಂಸವನ್ನು ಸೀಜ್ ಮಾಡಿದ್ದಾರೆ. ಸಾಬಿತ್ ನನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ದಾಳಿ ವೇಳೆ ಬಶೀರ್ ಓಡಿ ತಪ್ಪಿಸಿಕೊಂಡಿದ್ದಾನೆ. ಮನೆಯನ್ನೇ ಅಕ್ರಮ ಕಸಾಯಿಖಾನೆ ಮಾಡಿಕೊಂಡು ಆಸುಪಾಸಿನಲ್ಲಿ ಅಗತ್ಯ ಇದ್ದವರಿಗೆ ಮಾಂಸವನ್ನು ಪೂರೈಕೆ ಮಾಡುತ್ತಿದ್ದ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವುದರಿಂದ ಗೋವನ್ನು ಹತ್ಯೆ ಮಾಡುವುದು, ಮಾಂಸವನ್ನು ಮಾರಾಟ ಮಾಡುವುದು ಅಪರಾಧವಾಗಿದೆ. ಇತ್ತೀಚೆಗೆ ಬಜರಂಗದಳ ಕಾರ್ಯಕರ್ತರು ಸುದ್ದಿಗೋಷ್ಟಿ ಕರೆದು ಕಟ್ಟುನಿಟ್ಟಾಗಿ ನಿಮಯ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಉಳ್ಳಾಲ ಠಾಣೆ ವ್ಯಾಪ್ತಿಯ ಚೆಂಬುಗುಡ್ಡೆ ಎಂಬಲ್ಲಿಯೂ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದಲ್ಲಿಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದು ವಧಿಸುವುದಕ್ಕಾಗಿ ಇಡಲಾಗಿದೆ ಎನ್ನಲಾಗಿರುವ ದನವನ್ನು ವಶಕ್ಕೆ ಪಡೆದಿದ್ದಾರೆ.




