ಪಕ್ಷದಲ್ಲಿ ಭಿನ್ನಮತ ಸ್ಫೋಟ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ: ಉದ್ದವ್ ಠಾಕ್ರೆ
ಮುಂಬೈ: ತಮ್ಮ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ನಂತರ ಮೊದಲ ಬಾರಿಗೆ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ನಾನು ಕುರ್ಚಿಗಾಗಿ ಹೋರಾಡುವುದಿಲ್ಲ. ಮುಖ್ಯಮಂತ್ರಿ ಸ್ಥಾನದ ಮೇಲೆ ಯಾವುದೇ ಆಸೆ ಇಲ್ಲ ಮತ್ತು ನಮ್ಮ ಪಕ್ಷ ಶಿವಸೇನೆಯು ಹಿಂದುತ್ವವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
“ಸೂರತ್ ಮತ್ತು ಇತರ ಸ್ಥಳಗಳಲ್ಲಿ ಕುಳಿತು ಏಕೆ ಹೇಳಿಕೆಗಳನ್ನು ನೀಡುತ್ತೀರಿ? ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ನಾನು ಅಸಮರ್ಥನೆಂದು ನನ್ನ ಮುಂದೆ ಬಂದು ಹೇಳಿ. ನಾನು ತಕ್ಷಣ ರಾಜೀನಾಮೆ ನೀಡುತ್ತೇನೆ. ನಾನು ನನ್ನ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದೇನೆ ಮತ್ತು ನೀವೇ ಬಂದು ಅದನ್ನು ರಾಜಭವನಕ್ಕೆ ಕೊಂಡೊಯ್ಯಿರಿ” ಎಂದು ಠಾಕ್ರೆ ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಒಬ್ಬ ಶಾಸಕ ಆಕ್ಷೇಪಿಸಿದರೂ ನಾನು ರಾಜೀನಾಮೆ ನೀಡುತ್ತೇನೆ ಎಂದು ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ. 34 ಶಿವಸೇನೆ ಶಾಸಕರು ಬಂಡಾಯಗಾರ ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕನನ್ನಾಗಿ ಬೆಂಬಲಿಸಿ ರಾಜ್ಯಪಾಲರಿಗೆ ಪತ್ರ ಬರೆದ ನಂತರ ಉದ್ಧವ್ ಠಾಕ್ರೆ ಮಾತನಾಡಿದ್ದು, ಏಕನಾಥ್ ಶಿಂಧೆ ಅವರೊಂದಿಗೆ ಹೋಗಿರುವ ಶಾಸಕರಿಂದ ನನಗೆ ಕರೆಗಳು ಬರುತ್ತಿವೆ, ಅವರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆಂದು ಹೇಳುತ್ತಿದ್ದಾರೆ ಎಂದು ಮಹಾ ಸಿಎಂ ತಿಳಿಸಿದ್ದಾರೆ.




