ಪ್ರವಾದಿ ಮಹಮ್ಮದ್ ಪೈಗಂಬರವರ ಅವಹೇಳನ ಬಿಜೆಪಿಯ ಇನ್ನೊಂದು ಮುಖ ಬಯಲು: ಮುರಳೀಧರ ರೈ ಮಠಂತಬೆಟ್ಟು
ಬಿಜೆಪಿಗರು ಮಸೀದಿಗಳಲ್ಲಿ ಮಂದಿರದ ಕುರುಹು ಹುಡುಕುವುದನ್ನು ನಿಲ್ಲಿಸಲಿ: ಪ್ರವೀಣ್ ಚಂದ್ರ ಆಳ್ವ
ವಿಟ್ಲ: ಪ್ರವಾದಿ ಮಹಮ್ಮದ್ ಪೈಗಂಬರವರ ಅವಹೇಳನ ಬಿಜೆಪಿಯ ಇನ್ನೊಂದು ಮುಖವನ್ನು ಬಯಲು ಮಾಡಿದೆ ಎಂದು
ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.
ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರವಾದಿ ಮಹಮ್ಮದ್ ಪೈಗಂಬರವರು ವಿಶ್ವದಾದ್ಯಂತ ಸುಮಾರು ೧೬೦ ಕೋಟಿ ಜನರಿಗೆ ಆರಾಧ್ಯ ದೇವರ ಸ್ವರೂಪದಲ್ಲಿದ್ದಾರೆ. ಅದಲ್ಲದೆ ಮುಸ್ಲಿಂ ಸಮುದಾಯಕ್ಕೆ ಅವರು ಹಾಕಿ ಕೊಟ್ಟ ಜೀವನ ಕ್ರಮ ಶ್ರೇಷ್ಟತೆಯ ಸಾಲಿನಲ್ಲಿ ನಿಲ್ಲುತ್ತದೆ. ಬಿಜೆಪಿಗರು ಯಾವಾಗಲೂ ಅವರದೇ ಆದ ನಿಲುವಿನಲ್ಲಿ ತಮ್ಮ ಸಮರ್ಥನೆಯನ್ನು ನಿರೂಪಿಸುತ್ತಾರೆ. ಅವರು ಪ್ರಪಂಚದಲ್ಲಿ ಯಾರನ್ನು ಒಪ್ಪುತ್ತಾರೋ ಗೊತ್ತಿಲ್ಲ. ಮಹಾಪುರುಷ ದೇವಮಾನವರಾದ ಏಸು ಕ್ರಿಸ್ತ, ದಕ್ಷಿಣ ಭಾರತದ ದಂತ ಕಥೆ ದೇವ ಪುರುಷ ನಾರಾಯಣ ಗುರುಗಳ ಬಗ್ಗೆ ಬಹಳಷ್ಟು ನಿಂದನಾತ್ಮಕ ನಡವಳಿಕೆಗಳನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ಅದಲ್ಲದೆ ಸಂವಿಧಾನ ಶಿಲ್ಪಿ ಡಾ, ಬಿ. ಆರ್. ಅಂಬೇಡ್ಕರ್, ವಿಶ್ವದಾದ್ಯಂತ ತಮ್ಮ ಅಹಿಂಸಾ ಧರ್ಮದ ಮೂಲಕ ಮನೆಮಾತಾದ ಮಹಾತ್ಮ ಗಾಂಧಿಜಿಯವರನ್ನು ಇವರು ಒಪ್ಪುವುದಿಲ್ಲ. ಹಿಂದುಸ್ಥಾನದ ಪರಂಪರೆಗೆ ಅದರದ್ದೇ ಆದ ಇತಿಹಾಸವಿದೆ. ಬಿಜೆಪಿಗರು ತಮ್ಮ ಅಂಗ ಸಂಸ್ಥೆಗಳಿಂದ ಮತ್ತು ತಮ್ಮ ಚೇಲಗಳಿಂದ ಎಲ್ಲವನ್ನೂ ಮಾಡಿಸಿಕೊಂಡು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂದು ವರ್ತಿಸುತ್ತಾರೆ. ನಮ್ಮ ಶತ್ರು ರಾಷ್ಟ್ರ ಪಾಕಿಸ್ಥಾನ ಮುಸ್ಲಿಂ ರಾಷ್ಟ್ರವಾದರೂ ಕೊಲ್ಲಿ ದೇಶಗಳು ಅವರನ್ನು ಎಂದೂ ಬೆಂಬಲಿಸಲಿಲ್ಲ. ನಮ್ಮಲ್ಲಿ ನಂಬಿಕೆ ಇಟ್ಟಿದ್ದರು. ನಿರಂತರವಾಗಿ ಪೆಟ್ರೋಲ್ ಉತ್ಪಾದನೆಗಳನ್ನು ನಮಗೆ ಸರಬರಾಜು ಮಾಡುವ ಹಾಗೆ ನಮ್ಮ ದೇಶದ ಸುಮಾರು ೯೫ ಲಕ್ಷ ಉದ್ಯೋಗಿಗಳಿಗೆ ಆಶ್ರಯ ತಾಣವಾಗಿರುವ ಈ ರಾಷ್ಟ್ರಗಳೇ ಪ್ರವಾದಿ ಮಹಮ್ಮದರ ಅವಹೇಳನಗಳಿಂದ ನಮ್ಮಿಂದ ದೂರ ಸರಿಸುವ ಪ್ರಯತ್ನಗಳನ್ನು ಮಾಡುವುದು ದುರಾದೃಷ್ಟಕರ ಬೆಳವಣಿಗೆ.
೨೦೧೪ ರಲ್ಲಿ ಇದ್ದ ಸಾಲದ ಹೊರೆ ೫೫೦೦೦ ಲಕ್ಷ ಕೋಟಿಗಳು. ಆದರೆ ೨೦೨೨ ರಲ್ಲಿ ೯೪೦೦೦ ಲಕ್ಷ ಕೋಟಿಗಳಾಗಿ ಮಾರ್ಪಟ್ಟಿದೆ. ಅಲ್ಲದೆ ಇಂತಹ ಸನ್ನಿವೇಶಗಳಿಂದ ನಾವು ಆರ್ಥಿಕವಾಗಿ ಇನ್ನೂ ತಳಹದಿಗೆ ತಲುಪುವ ಪರಿಸ್ಥಿತಿಗೆ ಸಂಪೂರ್ಣವಾಗಿ ಕೇಂದ್ರ ಸರಕಾರವೇ ಹೊಣೆಯಾಗಬಹುದು. ಪೆಟ್ರೋಲ್ ಉತ್ಪನ್ನಗಳಿಂದ ಲೀಟರಿಗೆ ಸುಮಾರು ೩೮ ರೂಪಾಯಿ ಲಾಭದಿಂದ ಸರಕಾರ ನಡೆಯುವುದನ್ನು ಕೇಂದ್ರ ಸರಕಾರ ಮನಗಾಣಬೇಕು. ಇವರ ಈ ವರ್ತನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಹಾಗೆಯೇ ಧಾರ್ಮಿಕ ಅಹಿಷ್ಣುತೆಗಳಿಂದ ಮತ್ತು ಆರ್ಥಿಕ ಹಿನ್ನಡೆಗಳಿಂದ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾದ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ಪ್ರಧಾನಿಗಳಿಗೆ ಮನವಿ ಮಾಡುತ್ತೇವೆ. ಎಲ್ಲಾ ಬೆಳವಣಿಗೆಗೆ ಸಂಭಂದಪಟ್ಟಂತೆ ನೂಪೂರ್ ಶರ್ಮ ಮತ್ತು ಚಿಂದಲ್‌ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಈ ಮೂಲಕ ಆಗ್ರಹಿಸುತ್ತೇವೆ ಎಂದರು.
ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವರವರು ಮಾತನಾಡಿ ಬಿಜೆಪಿಗರು ದಯವಿಟ್ಟು ಇನ್ನು ಮುಂದೆ ಮಸೀದಿಗಳಲ್ಲಿ ಮಂದಿರದ ಕುರುಹು ಹುಡುಕುವ ಕೆಲಸ ಬಿಟ್ಟು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗದಂತೆ ಆಡಳಿತ ನಡೆಸಲಿ. ೧೯೪೭ ರಲ್ಲಿ ಸ್ವಾತಂತ್ರ್ಯ ಸಿಕ್ಕಿ ನಮ್ಮ ಸಂವಿಧಾನ ರೂಪಿಸಿಗೊಂಡ ಮೇಲೆ ಅದಕ್ಕೆ ಅದರದ್ದೇ ಆದ ನಿಯಮ ಕರಡು ಕಾನೂನುಗಳಿವೆ. ಮಾನ್ಯ ಮೋಹನ್ ಭಾಗವತ್ ಕೂಡ ಇದರ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ರಮಾನಾಥ ವಿಟ್ಲ, ವಿನ್ಸೆಂಟ್, ಶ್ರೀನಿವಾಸ್ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು.




