March 26, 2026

ಹಿಜಾಬ್ ವಿವಾದ ಆರಂಭವಾಗಿದ್ದ ಉಡುಪಿ ಕಾಲೇಜ್ ನಲ್ಲಿ ಈ ಬಾರಿ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳ: ಶಾಸಕ ರಘುಪತಿ ಭಟ್

0
901b6642-8cef-11ec-8ba1-508084a9585c_1644776763840.jpg

ಉಡುಪಿ: ಹಿಜಾಬ್ ವಿಚಾರಕ್ಕೆ ಚರ್ಚೆಗೆ ಒಳಗಾಗಿದ್ದ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದಾಖಲಾತಿಯು ಈ ವರ್ಷ ಹೆಚ್ಚಾಗಿದೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಕಾಲೇಜಿನ ಬೇಡಿಕೆ ಹೆಚ್ಚಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಕೂಡ ಈ ಬಾರಿ ಹೆಚ್ಚಾಗಿದೆ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಈ ವರ್ಷ ಕಂಪ್ಯೂಟರ್ ಸೈನ್ಸ್ ಹೊಸ ವಿಭಾಗ ಆರಂಭಿಸಲಾಗಿದೆ. ಕಾಮರ್ಸ್‌ನಲ್ಲೂ ಕಂಪ್ಯೂಟರ್ ಸೈನ್ಸ್ ವಿಭಾಗ ತೆರೆಯಲಾಗಿದೆ. ಟಿವಿ ಚರ್ಚೆ ಯಲ್ಲಿ ಕುಳಿತವರು ಉಡುಪಿಯ ಸೌಹಾರ್ದತೆ ಬಗ್ಗೆ ಏನೇನೋ ಮಾತನಾಡಿರಬಹುದು. ಆದರೆ ಉಡುಪಿಯಲ್ಲಿ ಸದಾ ಸೌಹಾರ್ದತೆ ಇದೆ ಎಂಬುದು ಸಾಬೀತಾಗಿದೆ ಎಂದರು.

ಹಿಜಾಬ್ ವಿಚಾರದಲ್ಲಿ ಕಾಲೇಜು ಪ್ರಖ್ಯಾತಿ ಮತ್ತು ಕುಖ್ಯಾತಿಗೆ ಒಳಗಾಗಿತ್ತು. ಆದರೂ ಒತ್ತಡದ ಮಧ್ಯೆ ನಮ್ಮ ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆಯುವಾಗ ಕಾಲೇಜು ಆವರಣದಲ್ಲಿ ಗೊಂದಲಮಯ ವಾತಾವರಣ ಇತ್ತು. ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸೆಸೆಲ್ಸಿ ವಿದ್ಯಾರ್ಥಿನಿ ೬೨೫ ಅಂಕ ಗಳಿಸಿದ್ದಾಳೆ. ೧೦ ವಿದ್ಯಾರ್ಥಿಗಳಿಗೆ ಆರುನೂರಕ್ಕೂ ಹೆಚ್ಚು ಅಂಕ ಸಿಕ್ಕಿದೆ. ಅನೇಕ ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.

ಉಪ್ಪಿನಂಗಡಿಯಲ್ಲಿ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಜಾಬ್ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರವಾಗಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಹಿಜಾಬ್ ಧರಿಸಿ ಬರುವ ಮಕ್ಕಳ ಪೋಷಕರ ಮೇಲೆ ಕ್ರಿಮಿನಲ್ ಕೇಸು ಹಾಕಬೇಕು. ಇಂದು ಮತಾಂಧರು ಮಾಧ್ಯಮಗಳ ಮೇಲೆ ಹಲ್ಲೆ ಮಾಡುವವರೆಗೆ ಬೆಳೆದಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಸಮಾಜ ಕೊಡ ಬೇಕಾಗುತ್ತದೆ. ಕಾನೂನು ಕೈಗೆತ್ತಿಕೊಂಡು ಕೋರ್ಟ್ ಆದೇಶ ಧಿಕ್ಕರಿಸುವುದು ಮೂರ್ಖತನ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!