ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಪತ್ನಿ ನೇಣು ಬಿಗಿದು ಆತ್ಮಹತ್ಯೆ

ನವದೆಹಲಿ: ಸಾಕೇತ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಪತ್ನಿ ಶನಿವಾರ ತಡರಾತ್ರಿ ದಕ್ಷಿಣ ದೆಹಲಿಯ ರಾಜ್‌ಪುರ ಖುರ್ದ್ ಎಕ್ಸ್‌ಟೆನ್ಶನ್ ಏರಿಯಾದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೊಲೀಸರು ಫ್ಲಾಟ್‌ನಿಂದ ಮೂರು ಡೆತ್ ನೋಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ತಮ್ಮ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 10.30ರ ಸುಮಾರಿಗೆ ನ್ಯಾಯಾಧೀಶರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಳಗ್ಗೆ 11.30ರ ಸುಮಾರಿಗೆ ಅವರ ಪತ್ನಿ ಮಾಳವೀಯನಗರ ಮಾರುಕಟ್ಟೆಗೆ ಹೋದವರು ಹಿಂತಿರುಗಲಿಲ್ಲ.
ಸಾಕೇತ್ ಪೊಲೀಸ್ ಠಾಣೆಯಲ್ಲಿ ಕಾಣೆ ದೂರು ದಾಖಲಿಸಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ 42 ವರ್ಷದ ಮಹಿಳೆ ಆಟೋ ರಿಕ್ಷಾಕ್ಕೆ ಏರುತ್ತಿರುವುದು ಕಂಡುಬಂದಿತ್ತು.
ಆಟೋ-ರಿಕ್ಷಾ ಚಾಲಕನನ್ನು ಪತ್ತೆಹಚ್ಚಿದಾಗ, ಆಟೋ ಚಾಲಕ ಮಹಿಳೆಯನ್ನು ರಾಜ್‌ಪುರ ಖುರ್ದ್‌ನಲ್ಲಿ ಡ್ರಾಪ್ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದನು. ಇದು ಅವರ ಸೋದರ ಮಾವನ ಮನೆ ಎಂದು ನ್ಯಾಯಾಧೀಶರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ. ನ್ಯಾಯಾಧೀಶರು, ಪೊಲೀಸರೊಂದಿಗೆ ಕಟ್ಟಡ ಬಳಿ ಬಂದಾಗ ಫ್ಲಾಟ್ ಹೊರಗಿನಿಂದ ಬೀಗ ಹಾಕಿರುವುದು ಕಂಡುಬಂತು.