ದ.ಕ ಜಿಲ್ಲಾಧಿಕಾರಿಯಾಗಿದ್ದಾಗ ನಾನು ಒಳ್ಳೆಯ ವ್ಯಕ್ತಿಯಾಗಿದ್ದೆ, ರಾಜೀನಾಮೆ ನೀಡಿದ ಬಳಿಕ ದೇಶದ್ರೋಹಿಯಾದೆ: ಸಸಿಕಾಂತ್ ಸೆಂಥಿಲ್

ಭಾರತ ದೇಶ ಯಾವುದು ಎಂದರೆ ವಿಭಿನ್ನತೆಯನ್ನು ಆಚರಿಸುದೇ ಭಾರತ, ವಿಭಿನ್ನತೆಯನ್ನು ಸಹಿಸಿಕೊಳ್ಳುವುದು ಭಾರತ ಅಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಸಾಮರಸ್ಯ ಮಂಗಳೂರು ಇದರ ವತಿಯಿಂದ ನಡೆದ ‘ಸೌಹಾರ್ದ ಸಮ್ಮಿಲನ’ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಪದವೇ ಇಲ್ಲ ಅದನ್ನು ಇತ್ತೀಚಿಗೆ ಸೇರಿಸಲಾಗಿದೆ.
ಮಂಗಳೂರು: ಎರಡುವರೆ ವರ್ಷಗಳ ಕಾಲ ದ.ಕ.ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿನ ಸ್ಥಿತಿಗತಿಗಳನ್ನು ತುಂಬಾ ಹತ್ತಿರದಿಂದ ತಿಳಿದು ಕೊಂಡಿರುವ ನನಗೆ ಮಂಗಳೂರು ಕೋಮುವಾದಿಗಳ ಕೇಂದ್ರವೆಂದು ಅನಿಸಿಲ್ಲ. ಇಲ್ಲಿನ ಶೇ.೧೦ರಷ್ಟು ಮಂದಿ ಮಾತ್ರ ಕೋಮು ಸಾಮರಸ್ಯ ಹದಗೆಡಿಸುತ್ತಿದ್ದಾರೆ. ಉಳಿದಂತೆ ಶೇ.೯೦ರಷ್ಟು ಮಂದಿ ಕೋಮು ಸಾಮರಸ್ಯಕ್ಕೆ ಹಾತೊರೆಯುತ್ತಿದ್ದಾರೆ. ಹಾಗಾಗಿ ಮಂಗಳೂರು ಯಾವತ್ತೂ ‘ಕೋಮುವಾದಿ’ಗಳ ಕೇಂದ್ರವಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ನಾನು ದ.ಕ ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೆ, ಎಲ್ಲರೊಂದಿಗೆ ಪ್ರೀತಿಯಲ್ಲಿ ಇದ್ದೆ ಆಗ ನಾನು ಒಳ್ಳೆಯ ವ್ಯಕ್ತಿ ಎಂದು ಎಲ್ಲರೂ ಹೇಳುತ್ತಿದ್ದರು, ಆದರೆ ಯಾವಾಗ ನಾನು ರಾಜೀನಾಮೆ ಪತ್ರ ಬರೆದು ರಾಜೀನಾಮೆಗೆ ಕಾರಣ ತಿಳಿಸಿದಾಗ ನಾನು ಆವತ್ತಿನಿಂದ ದೇಶದ್ರೋಹಿ ಆದೆ ಎಂದರು.
ಭಾರತವನ್ನು ನಂಬುವವರು ಮತ್ತು ನಂಬದವರು ಯಾರು ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬೇಕು. ನಾವು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ, ಆಸ್ತಿ ಸಂಪಾದಿಸಿಕೊಟ್ಟರೆ ಸಾಲದು. ನೆಮ್ಮದಿಯಿಂದ ಬದುಕುವ ವಾತಾವರಣವನ್ನೂ ಕೂಡ ಸೃಷ್ಟಿಸಬೇಕು. ಅದಕ್ಕಾಗಿಯಾದರೂ ನಾವು ನ್ಯಾಯದ ಪರ ನಿಲ್ಲಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಹಾಗಂತ ಬೀದಿಗಿಳಿಯಬೇಕು ಅಂತ ನಾನು ಹೇಳುವುದಿಲ್ಲ. ಅವರವರ ಇತಿಮಿತಿಯೊಳಗೆ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಭಜನೆಯ ಮನಸ್ಥಿತಿಯ ಶೇ.೧೦ರಷ್ಟು ಮಂದಿಯ ಜೊತೆ ಜಗಳವಾಡುವ ಬದಲು ಜನರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.