ನಂತೂರು: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್, ಇಬ್ಬರಿಗೆ ಗಂಭೀರ ಗಾಯ
ಮಂಗಳೂರು: ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಂತೂರು ಕಡೆಗೆ ಹೋಗಿರುವ ಬಿಕರ್ನಕಟ್ಟೆ ರಾ.ಹೆ 73 ನೇ ಡಾಮಾರು ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಸವಾರ ಗಣೇಶ್ ಹಿಂಬದಿ ಸವಾರ ಧೀರಜ್ ಗಂಭೀರ ಗಾಯಗೊಂಡಿದ್ದಾರೆ.
ಶನಿವಾರ ತಡರಾತ್ರಿ 2:15 ರ ವೇಳೆಗೆ ಗಣೇಶ್ ತನ್ನ ಸ್ನೇಹಿತ ಧೀರಜ್ ನನ್ನು ಮನೆಗೆ ಬಿಟ್ಟು ಬರುವುದಾಗಿ ಬೈಕ್ ನಲ್ಲಿ ನಂತೂರು ಕಡೆಗೆ ಹೋಗಿರುವ ರಾಷ್ಟ್ರೀಯ ಹೆದ್ದಾರಿ 73 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ, ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್ ಅನತಿ ದೂರದಲ್ಲಿ ಬಿದ್ದಿದೆ. ಸವಾರರು ಗಂಭೀರ ಗಾಯಗೊಂಡಿದ್ದಾರೆ.
ಇದೇ ವೇಳೆಗೆ ರೈಲ್ವೇ ಬಾಡಿಗೆಗೆಂದು ಹೋಗುತ್ತಿದ್ದ ಆಟೋ ಚಾಲಕ ಪ್ರವೀಣ್ ಎನ್ನುವವರು ರಸ್ತೆ ಬದಿ ಬಿದ್ದಿರುವ ಬೈಕ್ ಹಾಗೂ ಸವಾರರನ್ನು ನೋಡಿ ತಕ್ಷಣ ಸಾವರ್ಜನಿಕರ ನೆರವಿನಿಂದ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಸಂಬಂಧ ಪಟ್ಟ ಮನೆಯವರಿಗೆ ವಿಷಯ ತಿಳಿಸಿದ್ದಾರೆ.




