February 3, 2026

ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕದ ವ್ಯಾನ್ ಗೆ ಟ್ರಕ್ ಡಿಕ್ಕಿ: 7 ಮಂದಿ ಮೃತ್ಯು, 9 ಮಂದಿ ಗಾಯ

0
n3906770981653834995043fe837901777dfb4a4bded26d407d5d423e705314b314f52c50c3c0655770bfdf.jpg

ಲಖಿಂಪುರ: ಅಯೋಧ್ಯೆಗೆ ಹೋಗುತ್ತಿದ್ದ ಕರ್ನಾಟಕದ ವ್ಯಾನ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 9 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕದಿಂದ ಅಯೋಧ್ಯೆಗೆ ಹೋಗುತ್ತಿದ್ದ ವ್ಯಾನ್ ನಲ್ಲಿ 16 ಮಂದಿ ಪ್ರಯಾಣಿಕರಿದ್ದರು. ಮೋತಿಪುರದ ನಾನಿಹ ಮಾರುಕಟ್ಟೆಯಲ್ಲಿ ಎದುರಿಗೆ ಬಂದ ಟ್ರಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಘಟನೆಯಲ್ಲಿ ವ್ಯಾನ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಭೂಮಿಕಾ (16) ಅವರನ್ನು ವಿಡಿಯೋ ಕಾಲ್ ಮತ್ತು ಫೋಟೋ ಗಳೊಂದಿಗೆ ಕುಟುಂಬಸ್ಥರೊಂದಿಗೆ ಸಂಪರ್ಕಿಸಿ ಮೃತರನ್ನು ಗುರುತಿಸಲಾಗಿದೆ. ಮೃತರನ್ನು ಶಿವಕುಮಾರ್ ಪೂಜಾರಿ (28) ಜಗದಾಂಬ (52) ಮನ್ ಮತ್ (36) ಅನಿಲ್ (30) ಸಂತೋಷ್ (35) ಶಶಿಕಲಾ (38) ಮತ್ತು ಸರಸ್ವತಿ (47) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೀದರ್ ಜಿಲ್ಲೆಯ ಗಾಂದಿ ಗಂಜ್ ನವರು ಎಂದು ಪೊಲೀಸರು ಹೇಳಿದ್ದಾರೆ.

ಟ್ರಕ್ ಚಾಲಕ ಘಟನೆ ನಂತರ ತಲೆಮರೆಸಿಕೊಂಡಿದ್ದು, ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್ ಪಿ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!