ಕಾಂಗ್ರೆಸ್ ಸೇರ್ಪಡೆ ಸಂದೇಶ: ಹನೀಫ್ ಖಾನ್ ಕೋಡಾಜೆ ಹೇಳಿದ್ದು ಹೀಗೆ!

ಬಂಟ್ವಾಳ: ಎಸ್.ಡಿ.ಪಿ.ಐ. ನಾಯಕ ಹನೀಫ್ ಖಾನ್ ಕೋಡಾಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ತಾಣದಲ್ಲಿ ಇಂದು ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹನೀಫ್ ಖಾನ್ ಕೋಡಾಜೆ, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ನನಗೂ ಆ ಸಂದೇಶ ನೋಡಿಯೇ ಗೊತ್ತಾಗಿದೆ ಎಂದಿದ್ದಾರೆ.
“ಶೀಘ್ರದಲ್ಲೇ ಹನೀಫ್ ಖಾನ್ ಕೋಡಾಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ” ಎಂಬ ಸಂದೇಶ ವಾಟ್ಸ್ ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬೆಳಗ್ಗೆಯಿಂದ ಹರಿದಾಡುತ್ತಿದೆ. ಈ ಬಗ್ಗೆ ದೂರವಾಣಿ ಮೂಲಕ ತನ್ನನ್ನು ಸಂಪರ್ಕಿಸಿದ ಪತ್ರಕರ್ತರೊಂದಿಗೆ ಅವರು ಪ್ರತಿಕ್ರಿಯಿಸಿದರು.
ನಾನು ಈಗ ಎಸ್.ಡಿ.ಪಿ.ಐ.ನಲ್ಲಿ ಇದ್ದೇನೆ. ಮುಂದೆಯೂ ಎಸ್.ಡಿ.ಪಿ.ಐ.ನಲ್ಲೇ ಇರುತ್ತೇನೆ. ಪಕ್ಷ ಬದಲಾವಣೆ ಮಾಡುವವರು ತಮ್ಮ ಸಿದ್ಧಾಂತವನ್ನೂ ಬದಲಾವಣೆ ಮಾಡಬೇಕು. ನನ್ನ ಜೀವನದಲ್ಲಿ ರೂಢಿಸಿಕೊಂಡು ಬಂದ ಸಿದ್ಧಾಂತವನ್ನು ಎಂದಿಗೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಪಕ್ಷ ಬದಲಾವಣೆ ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು.
ನಾನು ಪಕ್ಷಾಂತರ ಮಾಡುತ್ತಿದ್ದೇನೆ ಎಂಬುದು ಸಾಮಾಜಿಕ ಜಾಲದಲ್ಲಿ ನೋಡಿಯೇ ನನಗೂ ತಿಳಿದಿರುವುದು. ಹೆಚ್ಚಿನ ಮಾಹಿತಿ ಬೇಕಾದರೆ ನಾನು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಸಾಮಾಜಿಕ ತಾಣದಲ್ಲಿ ಓದಿದ್ದೀರೋ ಆ ಪಕ್ಷದ ನಾಯಕರನ್ನು ಸಂಪರ್ಕಿಸಿ ವಿವರ ಕೇಳಿ. ಅಥವಾ ನಾನಿರುವ ಪಕ್ಷದ ನಾಯಕರಿಗೆ ಕರೆ ಮಾಡಿ ಮಾಹಿತಿ ಕೇಳಿ ಎಂದರು.
