ತಮಿಳುನಾಡು ನಾಡಗೀತೆಯ ಸಮಯದಲ್ಲಿ ನಿಲ್ಲದಿದ್ದಕ್ಕಾಗಿ ನಿತಿನ್ ಗಡ್ಕರಿ ವಿರುದ್ಧ ಟೀಕೆ

ಚೆನ್ನೈ: ತಮಿಳುನಾಡು ನಾಡಗೀತೆಗೆ ಅಗೌರವ ತೋರಿಸಿದ್ದಾರೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಿತಿನ್ ಗಡ್ಕರಿ ಅವರು ಚೆನ್ನೈನಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ತಮಿಳುನಾಡು ನಾಡಗೀತೆಗೆ ಎದ್ದುನಿಲ್ಲದ ಕಾರಣ ಟೀಕೆಗೆ ಗುರಿಯಾಗಿದ್ದಾರೆ.
ತಮಿಳುನಾಡು ಐಟಿ ಸಚಿವ ಮನೋ ತಂಗರಾಜ್ ಅವರು ಗಡ್ಕರಿ ಅವರನ್ನು ದುರಂಹಕಾರಿ ಎಂದು ಕರೆದಿದ್ದಾರೆ. ಅಲ್ಲದೇ ಅವರು ತಮಿಳು ಜನರನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ವರ್ಷ ತಮಿಳುನಾಡು ಸರ್ಕಾರ ‘ತಮಿಳ್ ಥಾಯ್ ವಾಝ್ತು’ ಹಾಡನ್ನು ನಾಡಗೀತೆ ಎಂದು ಘೋಷಿಸಿತ್ತು. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುವಂತೆ ನಿರ್ದೇಶಿಸಿತ್ತು. ವಿಕಲಚೇತನರನ್ನು ಹೊರತುಪಡಿಸಿ ಎಲ್ಲರೂ ಅದನ್ನು ಹಾಡುವಾಗ ನಿಲ್ಲಬೇಕು ಎಂದು ತಮಿಳುನಾಡು ಸರ್ಕಾರ ಹೇಳಿದೆ.
ತಮ್ಮ ದುರಹಂಕಾರದ ಮತ್ತು ಬೇಜವಾಬ್ದಾರಿ ಕೃತ್ಯಕ್ಕೆ ಕಾರಣಗಳನ್ನು ನೀಡುವಂತೆ ತಂಗರಾಜ್ ಅವರು ಟ್ವೀಟ್ ನಲ್ಲಿ ನಿತಿನ್ ಗಡ್ಕರಿ ಅವರನ್ನು ಕೇಳಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಚೆನ್ನೈ ಪ್ರವಾಸದ ವೇಳೆ ಈ ಘಟನೆ ನಡೆದಿದೆ.