December 15, 2025

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಪ್ರಕರಣ: ಪಿ.ಸಿ.ಜಾರ್ಜ್‌ ಜಾಮೀನು ರದ್ದು

0
1500x900_384265-p-c-george-mla-1.png

ತಿರುವನಂತಪುರ: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್‌ ಅವರಿಗೆ ನೀಡಲಾಗಿದ್ದ ಜಾಮೀನನ್ನು ಕೇರಳದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಬುಧವಾರ ರದ್ದುಗೊಳಿಸಿದೆ.

ಜಾಮೀನು ನೀಡುವ ವೇಳೆ ವಿಧಿಸಿದ ನಿಯಮ ಉಲ್ಲಂಘಿಸಿ, ಜಾರ್ಜ್‌ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಕೋಮು ದ್ವೇಷ ಹರಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಜಾಮೀನು ನೀಡುವಾಗ ವಿಧಿಸಲಾಗಿದ್ದ ನಿಯಮಗಳನ್ನು ಉಲ್ಲಂಘಿಸಿದ್ದು, ಅವರ ಜಾಮೀನು ರದ್ದುಗೊಳಿಸಬೇಕು ಎಂಬ ಪೊಲೀಸರ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿದೆ.

‘ಜಾಮೀನು ನೀಡುವಾಗ ಆರೋಪಿಯು ಮತ್ತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಮತ್ತು ಅಂಥ ಹೇಳಿಕೆಗಳನ್ನು ಪ್ರಚಾರ ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಆದಾಗ್ಯೂ, ಜಾರ್ಜ್ ಅವರು ವಂಚಿಯೂರ್‌ನಲ್ಲಿ ನ್ಯಾಯಾಲಯ ಅಧಿಕಾರಿ ನಿವಾಸದ ಬಳಿಯೇ ತಮ್ಮ ಭಾಷಣದ ಹೇಳಿಕೆಗಳಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಟಿವಿ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಮೂಲಕ ಅವರು ಮತ್ತೆ ಕೋಮು ದ್ವೇಷ ಹರಡಿದ್ದಾರೆ’ ಎಂದು ಪೊಲೀಸರು ಆರೋಪಿಸಿದರು.

ಏಪ್ರಿಲ್‌ 29ರಂದು ನಡೆದ ಆನಂತಪುರಿ ಹಿಂದೂ ಮಹಾ ಸಮ್ಮೇಳನದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಜಾರ್ಜ್‌ ಅವರನ್ನು ಮೇ 1ರಂದು ಬಂಧಿಸಲಾಗಿತ್ತು.

70 ವರ್ಷದ ಹಿರಿಯ ರಾಜಕಾರಣಿಯಾದ ಜಾರ್ಜ್ ಅವರು, ಕೇರಳದಲ್ಲಿರುವ ಮುಸ್ಲಿಂಯೇತರರು ಮುಸ್ಲಿಂ ಸಮುದಾಯ ನಡೆಸುವ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಬೇಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಬಳಿಕ ಮೇ 10ರಂದು ಅವರ ವಿರುದ್ಧ ಮತ್ತೊಂದು ದ್ವೇಷ ಭಾಷಣದ ಪ್ರಕರಣ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!