ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ: ಇಬ್ಬರು ಮೃತ್ಯು, ಮೂವರು ಗಂಭೀರ ಗಾಯ
ಬಾಗಲಕೋಟೆ: ಶಾಲೆಯಿಂದ ಮನೆಗೆ ತೆರಳುತ್ತಿದ್ದಂತ ವಿದ್ಯಾರ್ಥಿಗಳ ಮೇಲೆ ಯಮ ಸ್ವರೂಪಿಯಾಗಿ ಬಂದಂತ ಕಾರೊಂದು ಡಿಕ್ಕಿಯಾಗಿ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಬಾಗಲಕೋಟೆಯ ಐಹೊಳೆ ಸಮೀಪ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಬಳಿಯ ಕ್ಯಾದಿಗೇರಿ ಕ್ರಾಸ್ ಬಳಿಯಲ್ಲಿ, ಇಂದು ವಿದ್ಯಾರ್ಥಿಗಳು ತರಗತಿ ಮುಗಿಸಿಕೊಂಡು ತಮ್ಮ ಮನೆಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಕಾರೊಂದು ಡಿಕ್ಕಿಯಾದ ಪರಿಣಾಮ, ಸ್ಥಳದಲ್ಲಿಯೇ ನೇತ್ರಾವತಿ ರಗಟಿ (14), ಅಂಜಲಿ ಸೂಡಿ (14) ಸಾವನ್ನಪ್ಪಿದ್ದು, ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇನ್ನೂ ಈ ಶಾಲಾ ವಿದ್ಯಾರ್ಥಿಗಳು ಐಹೊಳೆಯಿಂದ ಚಿಲ್ಲಾಪುರಕ್ಕೆ ಶಾಲೆಯನ್ನು ಮುಗಿಸಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಬಂದಂತ ಕಾರು ವಿದ್ಯಾರ್ಥಿಗಳಿಗೆ ಡಿಕ್ಕಿಯಾಗಿದೆ. ಚಾಲಕ ಅಪಘಾತದ ಬಳಿಕ ಪರಾರಿಯಾಗಿದ್ದಾನೆ. ಈ ಸಂಬಂಧ ಅಮೀನಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





