ಪುತ್ತೂರು: ಗಾಂಜಾ ಸಾಗಾಟ ಪ್ರತ್ಯೇಕ ಪ್ರಕರಣದಲ್ಲಿ ವಿಟ್ಲ ನಿವಾಸಿ ಸಹಿತ ಮೂವರ ಬಂಧನ- ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ವಶಕ್ಕೆ
ಪುತ್ತೂರು: ಗಾಂಜಾವನ್ನು ಇರಿಸಿಕೊಂಡಿದ್ದ ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಪುತ್ತೂರು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಯ ಬಳಿಯಲ್ಲಿ ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ಸುಮಾರು ರೂ. ೫.೮೬ ಲಕ್ಷ ಮೌಲ್ಯದ ಸೊತ್ತುಗಳು ಪತ್ತೆಯಾಗಿದೆ.
ವಿಟ್ಲ ಕುಂಡಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ ಮುವಾಝ್, ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಶಫೀಕ್ ಕೆ.ವಿ(24) ಮತ್ತು ಕುಂತೂರು ಎರ್ಮಲ ನಿವಾಸಿ ರಾಝೀಕ್(28) ಬಂಧಿತ ಆರೋಪಿಗಳು.
ವೀರಮಂಗಲ ರೈಲ್ವೇ ಹಳಿಗಳ ಸಮೀಪ ಬ್ಯಾಗ್ ಅನ್ನು ಹಿಡಿದು ಕೊಂಡು ನಿಂತಿದ್ದ ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಶಫೀಕ್ ಕೆ.ವಿ(24) ಮತ್ತು ಕುಂತೂರು ಎರ್ಮಲ ನಿವಾಸಿ ರಾಝೀಕ್(28)ರವರನ್ನು ವಿಚಾರಿಸಿದ ಪೊಲೀಸರಿಗೆ ಅವರ ಬಳಿ ಗಾಂಜಾ ಇರುವುದು ಬೆಳಕಿಗೆ ಬಂದಂತೆ ಅವರಿಬ್ಬರನ್ನು ಬಂಧಿಸಿ ವಿಚಾರಿಸಿದಾಗ ಅವರ ಸ್ನೇಹಿತ ವಿಟ್ಲದ ಕುಂಡಡ್ಕ ಶಾಂತಿಮಾರು ನಿವಾಸಿ ಮಹಮ್ಮದ್ ಮುವಾಝ್(30) ಅವರು ಗಾಂಜಾ ಸರಬರಾಜು ಮಾಡುವ ಕುರಿತು ತಿಳಿಸಿದ್ದರು. ಮಹಮ್ಮದ್ ಮುವಾಝ್ ಅವರು ಮಂಗಳೂರಿನಿಂದ ಗಾಂಜಾ ಮಾರಾಟ ಮಾಡಿಕೊಂಡು ಕಾರಿನಲ್ಲಿ ಬರುತ್ತಿದ್ದಂತೆ ಅವರನ್ನು ಬಂಧಿತ ಆರೋಪಿಗಳ ಮೂಲಕ ಕೆದಿಲ ಗ್ರಾಮದ ಪೇರಮೊಗ್ರು ಸಮೀಪ ಬರುವಂತೆ ಮಾಡಿ ಅಲ್ಲಿ ಕಾರನ್ನು ನಿಲ್ಲಿಸಿ ಆರೋಪಿ ಪರಾರಿಯಾಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನಲ್ಲಿ ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ರೂ. ೫.೮೬ ಲಕ್ಷದ ಸೊತ್ತು ವಶ:
ಆರೋಪಿ ಮಹಮ್ಮದ್ ಮುವಾಝ್ ಅವರನ್ನು ಬಂಧಿಸಿದ ಬಳಿಕ ಆತನ ಪ್ಯಾಂಟ್ ಕಿಸೆಯನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದ ರೂ. ೫೦ಸಾವಿರ ಮೌಲ್ಯದ ಪಿಸ್ತೂಲ್ ಮತ್ತು ಎರಡು ಸಜೀವ ಗುಂಡುಗಳು, ಕಾರನ್ನು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಯಲ್ಲಿ ೨.೦೭೫ ಕೆ.ಜಿ ಗಾಂಜಾ, ಗಾಂಜಾ ತುಂಬಿದ ೫೦ ಗ್ರಾಂ ತೂಕದ ೫ ಪ್ಯಾಕೆಟ್, ರೂ. ೩೩೦ ನಗದು, ಪಾನ್ ಕಾರ್ಡ್, ಜಗದೀಶ್ ಪ್ರಸಾದ್ ಎಂಬವರ ಬ್ಯಾಂಕ್ ಆಫ್ ಬರೋಡದ ಎಟಿಎಂ ಕಾರ್ಡ್, ೧೦ ಕರ್ಣಾಟಕ ಬ್ಯಾಂಕ್‌ನ ಎಟಿಂ ಕಾರ್ಡ್, ಹೊಟೇಲ್ ಸಾಯಿ ಸಿದ್ದಾರ್ಥ ಲಾಡ್ಜ್‌ನ ವಿಸಿಟಿಂಗ್ ಕಾರ್ಡ್, ಸ್ಟೀಲ್ ಸ್ಟಿಕ್, ರೂ. ೫ಸಾವಿರ ಮೌಲ್ಯದ ಮೊಬೈಲ್ ಪೋನ್‌ಗಳು, ಪಿಸ್ತೂಲ್ ಮಾದರಿಯ ಸಿಗರ್ ಲೈಟ್, ಮಾತ್ರೆಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಐ ೨೦ ಕಾರು ಸೇರಿದಂತೆ ಒಟ್ಟು ರೂ. ೫,೮೬,೫೩೦ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಅವರ ಮಾರ್ಗದರ್ಶನದಂತೆ ಎಸ್.ಐ ನಸ್ರೀನ್ ತಾಜ್ ಚಟ್ಟರಕಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




