March 25, 2026

ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ವಿಚಾರಕ್ಕೆ ಠಾಣೆಗೆ ಬೆಂಕಿ: ಆರೋಪಿಗಳ ಮನೆ ದ್ವಂಸಗೊಳಿಸಿದ ಸರ್ಕಾರ

0
Screenshot_20220522-170806_Chrome.jpg

ನಾಗಾಂವ್: ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದ ಆರೋಪಿಗಳ ವಿರುದ್ಧ ಅಸ್ಸಾಂನ ನಾಗಾಂವ್ ಜಿಲ್ಲಾಡಳಿತ ಬುಲ್ಡೋಜರ್ ಕ್ರಮ ಕೈಗೊಂಡಿದ್ದು, ಆರೋಪಿಗಳ 5 ಮನೆಗಳನ್ನು ಧ್ವಂಸ ಮಾಡಿದೆ.

ಅಸ್ಸಾಂನ ನಾಗಾಂವ್ ಆಡಳಿತವು ಭಾನುವಾರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಐದು ಆರೋಪಿಗಳ ನಿವಾಸಗಳನ್ನು ನೆಲಸಮಗೊಳಿಸಿದೆ.

ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯ ಬಟಾದ್ರವ ಎಂಬಲ್ಲಿ ಶನಿವಾರ ನಡೆದಿತ್ತು. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಾಗಾಂವ್ ಎಸ್‌ಪಿ ಲೀನಾ ಡೋಲೆ ತಿಳಿಸಿದ್ದಾರೆ.

ಮೀನು ವ್ಯಾಪಾರಿಯೊಬ್ಬರು ಶುಕ್ರವಾರ ರಾತ್ರಿ ಶಿವಸಾಗರ್ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಕಾರಣ ಕ್ರೋಧಗೊಂಡ ಗುಂಪು, ಠಾಣೆಗೆ ಬೆಂಕಿ ಹಚ್ಚಿದೆ ಎನ್ನಲಾಗಿದೆ. ಎರಡು ದ್ವಿಚಕ್ರ ವಾಹನಗಳನ್ನೂ ಗುಂಪು ಸುಟ್ಟುಹಾಕಿದೆ. ಬಂಧಿತರನ್ನು ಬಿಡಿಸಿಕೊಂಡು ಬರಲೆಂದು ಪೊಲೀಸ್ ಠಾಣೆಗೆ ತೆರಳಿದ್ದಾಗ ಪೊಲೀಸರು 10,000 ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶನಿವಾರ ಬೆಳಿಗ್ಗೆ ಬಂಧಿತ ವ್ಯಕ್ತಿಯ ಪತ್ನಿ ಹಣ ತೆಗೆದುಕೊಂಡು ಠಾಣೆಗೆ ಹೋಗಿದ್ದರು. ಆದರೆ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ದೊರೆಯಿತು. ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದು ತಿಳಿಯಿತು. ಪೊಲೀಸರು ಹಲ್ಲೆ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ್ ಸಫೀಕುಲ್‌ ಇಸ್ಲಾಂ ದುರದೃಷ್ಟಕರ ಸಾವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ದಾರೆ. ವ್ಯಕ್ತಿಯ ಸಾವಿಗೆ ಸಂಭಂಧಿಸಿ ಬಟದ್ರಬಾ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ನಮ್ಮ ಕಡೆಯಿಂದ ಏನಾದರೂ ಅನಾಹುತವಾದರೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!