ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಗೆಲುವಿನ ನಗೆ ಬೀರಿದ ಕಾಂಗ್ರೆಸ್
ಹಾನಗಲ್: ಭಾರೀ ಕೂತುಹಲ ಕೆರಳಿಸಿದ್ದ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿವೆ.
ಸಿಂದಗಿಯಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಆದರೆ ಎರಡೂ ಕಡೆ ಠೇವಣಿ ಕಳೆದುಕೊಂಡಿರುವ ಜೆಡಿಎಸ್ ಹೀನಾಯ ಸೋಲು ಕಂಡಿದೆ. ಈ ಉಪ ಚುನಾವಣೆ ಫಲಿತಾಂಶ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಅವರ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡಿದೆ.
ಮಾಜಿ ಸಚಿವ ಸಿ.ಎಂ.ಉದಾಸಿಯವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರದಲ್ಲಿ, ಕಾಂಗ್ರೆಸ್ ಪಕ್ಷವು ಕ್ಷತ್ರಿಯ ಮರಾಠ ಸಮುದಾಯದ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯಿಂದ ಗಾಣಿಗ ಸಮುದಾಯದ ಶಿವರಾಜ್ ಸಜ್ಜನರ ಕಣಕ್ಕಿಳಿದಿದ್ದರು.
ಸಿ.ಎಂ. ಉದಾಸಿಯವರ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಅನೇಕ ಸಲ ಕಾಂಗ್ರೆಸ್ ಅಭ್ಯರ್ಥಿಗಳೂ ಮೇಲುಗೈ ಸಾಧಿಸಿದ್ದಿದೆ. ಜೆಡಿಎಸ್ ಇಲ್ಲಿ ಮುಸ್ಲಿಂ ವ್ಯಕ್ತಿ ನಿಯಾಜ್ ಶೇಖ್ ಅವರನ್ನು ಈ ಬಾರಿ ಕಣಕ್ಕಿಳಿಸಿತ್ತು.
ಮತ ಎಣಿಕೆಯ 18ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರು 83,324 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರರವರು 75,999 ಮತಗಳಿಗೆ ಸೀಮಿತವಾದರು. ಇನ್ನು ಜೆಡಿಎಸ್‌ನ ನಿಯಾಜ್ ಶೇಖ್ ಕೇವಲ 566 ಮತಗಳನ್ನು ಪಡೆದರು.
ಹಾನಗಲ್ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪ್ರತಿಷ್ಠೆಯ ಕಣವಾಗಿತ್ತು. ತವರು ಜಿಲ್ಲೆ ಎಂಬುದು ಒಂದು ಕಾರಣವಾದರೆ ಅವರು ಸಿಎಂ ಆದ ಬಳಿಕ ನಡೆಯುತ್ತಿರುವ ಮಹತ್ವದ ಉಪಚುನಾವಣೆ ಇದಾಗಿದೆ. ಆದರೆ ತವರು ಕ್ಷೇತ್ರದಲ್ಲಿಯೇ ಅವರು ಮುಖಭಂಗ ಅನುಭವಿಸಿದ್ದಾರೆ. ಇದು 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನಲೆಗೆ ತರಲಿದೆ.