March 22, 2026

ಉಡುಪಿ: ಕಾರು ಚಾಲಕನಿಂದ ಸುಲಿಗೆ ಪ್ರಕರಣ: ವಿಟ್ಲದ ಶರತ್ ಸಹಿತ ನಾಲ್ವರು ಆರೋಪಿಗಳ ಬಂಧನ

0
image_editor_output_image-2134196811-1652769361224.jpg

ಉಡುಪಿ: ಮಣಿಪಾಲದಿಂದ ಬಾಡಿಗೆ ಹೆಸರಿನಲ್ಲಿ ಕಾರವಾರಕ್ಕೆ ಕರೆದೊಯ್ದು ಚಾಲಕನನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರು ಉಳ್ಳಾಲ ನಿವಾಸಿ ಚರಣ್‌ (35), ಶಿರ್ವ ನಿವಾಸ ಮೊಹಮ್ಮದ್‌ ಅಝರುದ್ದೀನ್‌ (39), ವಿಟ್ಲ ನಿವಾಸಿ ಶರತ್‌ ಪೂಜಾರಿ (36) ಮತ್ತು ಮಂಗಳೂರು ನಿವಾಸಿ ಜಯಪ್ರಸಾದ್‌ (43) ಎನ್ನಲಾಗಿದೆ.

ಶ್ರೀಧರ್ ರವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ಈ ವೇಳೆ ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು.

ರಾತ್ರಿ 8.40 ಗಂಟೆಗೆ ಅಂಕೋಲ ರೈಲ್ವೆ ನಿಲ್ದಾಣದ ಸಮೀಪ ಕಾರನ್ನು ಆರೋಪಿಗಳು ನಿಲ್ಲಿಸಲು ಹೇಳಿ, ಹಿಂಬದಿಯಲ್ಲಿದ್ದ ಓರ್ವ ಶ್ರೀಧರ ರವರ ಕುತ್ತಿಗೆಯನ್ನು ಒತ್ತಿ ಹಿಡಿದು, ಉಳಿದ ಮೂವರು ಅವರನ್ನು ಚಾಲಕ ಸೀಟಿನಿಂದ ಹಿಂದಿನ ಸೀಟಿಗೆ ಎಳೆದು ಕುಳ್ಳಿರಿಸಿದ್ದರು. ನಂತರ ಚೂರಿ ತೋರಿಸಿ, ಶ್ರೀಧರ ಭಕ್ತ ಪರ್ಸ್‌ನಲ್ಲಿದ್ದ 3000ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ತೆಗೆದುಕೊಂಡಿದ್ದರು.

ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಕಾರನ್ನು ಚಲಾಯಿಸಿಕೊಂಡು ಕುಂದಾಪುರದ ಆನೆಗುಡ್ಡೆಗೆ ಕರೆದುಕೊಂಡು ಬಂದಿದ್ದು, ಎಟಿಎಂ ಬಳಿ ಕಾರನ್ನು ನಿಲ್ಲಿಸಿ ಹಣ ತೆಗೆದು ತರುವಂತೆ ಶ್ರೀಧರ ಭಕ್ತನಿಗೆ ಹೇಳಿದ್ದರು ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋದ ಶ್ರೀಧರ್ ಭಕ್ತ, ಸ್ಥಳದಿಂದ ಓಡಿ ಹೋಗಿ ಪರಾರಿಯಾಗಿದ್ದರು ಎನ್ನಲಾಗಿದ್ದು, ಬಳಿಕ ಶ್ರೀಧರ ಭಕ್ತ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದರು.

ಶ್ರೀಧರ ಭಕ್ತ ದೂರಿನಂತೆ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!