ಅಸ್ಸಾಂನಲ್ಲಿ ಪ್ರವಾಹ, ಭೂಕುಸಿತ: ಐವರು ಮೃತ್ಯು, 20 ಜಿಲ್ಲೆಗಳಲ್ಲಿ 1.92 ಲಕ್ಷ ಜನರು ಅತಂತ್ರ
ಗುವಾಹಟಿ: ನಿರಂತರ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಐದು ಜನರು ಸಾವಿಗೀಡಾಗಿದ್ದು, ಸೋಮವಾರ 20 ಜಿಲ್ಲೆಗಳಲ್ಲಿ 1.92 ಲಕ್ಷ ಜನರು ತೊಂದರೆಗೀಡಾಗಿದ್ದಾರೆ.
ಮಧ್ಯ ಅಸ್ಸಾಂ ಜಿಲ್ಲೆಗಳಾದ ದಿಮಾ ಹಸಾವೊ, ಹೋಜೈ ಮತ್ತು ದಕ್ಷಿಣ ಅಸ್ಸಾಂನ ಕ್ಯಾಚಾರ್ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದೆ. ಮಳೆ ಮತ್ತು ಭೂಕುಸಿತದಿಂದಾಗಿ ಲುಮ್ಡಿಂಗ್-ಬದರ್‌ಪುರ್ ಪರ್ವತ ವಲಯದ ರೈಲು ಮಾರ್ಗಗಳು ಕೊಚ್ಚಿಹೋಗಿವೆ.
‘ದಿಮಾ ಹಸಾವೊದಲ್ಲಿನ ಡಿಟೋಕ್ಚೆರಾ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಸುಮಾರು 1,600 ರೈಲ್ವೆ ಪ್ರಯಾಣಿಕರನ್ನು ನಿನ್ನೆಯಿಂದ ರಕ್ಷಿಸಲಾಗಿದೆ. ಅವರನ್ನು ಬದರ್‌ಪುರ್ ಮತ್ತು ಸಿಲ್ಚಾರ್‌ಗೆ ಕಳುಹಿಸಲಾಗಿದೆ.
1,600 ಪ್ರಯಾಣಿಕರ ಪೈಕಿ 119 ಜನರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ’ ಎಂದು ಈಶಾನ್ಯ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸವ್ಯಸಾಚಿ ಡಿ ಸೋಮವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋಮವಾರದ ನಿರಂತರ ಮಳೆಯು ಮತ್ತಷ್ಟು ಭೂಕುಸಿತ ಉಂಟುಮಾಡಿದ್ದು, ರಕ್ಷಣಾ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ.
ನಿರಂತರ ಮಳೆಯಿಂದಾಗಿ ಲುಮ್ಡಿಂಗ್-ಬದರ್‌ಪುರ ವಲಯದಲ್ಲಿ ಕನಿಷ್ಠ 53 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ‘ನ್ಯೂ ಹ್ಯಾಫ್ಲಾಂಗ್ ರೈಲ್ವೆ ನಿಲ್ದಾಣವು ಸಂಪೂರ್ಣವಾಗಿ ಅವಶೇಷಗಳಿಂದ ತುಂಬಿದೆ. ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಪ್ಯಾಸೆಂಜರ್ ರೈಲು ಬೃಹತ್ ಭೂಕುಸಿತದಿಂದಾಗಿ ಕೊಚ್ಚಿಹೋಗಿದೆ.