ಇಂಧನ ಬೆಲೆ ಏರಿಕೆ ಖಂಡಿಸಿ ಕೊಚ್ಚಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ:
ರಸ್ತೆ ತಡೆ ವಿರೋಧಿಸಿದ ನಟ ಜೋಜು ಜಾರ್ಜ್; ಕಾರು ಧ್ವಂಸ
ಕೊಚ್ಚಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯು ನಟ ಜೋಜು ಜಾರ್ಜ್ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾದ ಕಾರಣ ಕೊಚ್ಚಿ ನಗರದಲ್ಲಿ ಸೋಮವಾರ ಹೈ ಡ್ರಾಮಾ ನಡೆಯಿತು.
ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ಜೋಜು ಅವರನ್ನು ಹೋಗಲು ಬಿಡಲು ನಿರಾಕರಿಸಿದ ನಂತರ ಪೊಲೀಸರು ಜೋಜು ಅವರನ್ನು ಸಮಾಧಾನ ಮಾಡಿ ಕಳುಹಿಸಿದರು. ನಟನ ಕಾರಿನ ಹಿಂಬದಿಯ ಗಾಜು ಪುಡಿಪುಡಿಯಾಗಿದೆ.
ಎಡಪ್ಪಲ್ಲಿಯಿಂದ ವೈಟ್ಟಿಲದವರೆಗೆ ಕಾಂಗ್ರೆಸ್ ರಸ್ತೆ ತಡೆ ಆರಂಭಿಸಿದ ನಂತರ ಜನನಿಬಿಡ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಬ್ಲಾಕ್ ಆಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮುಂದುವರಿದಾಗ ಜೋಜು ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಈ ಪ್ರತಿಭಟನೆಯು ಆಸ್ಪತ್ರೆಯ ತುರ್ತುಸ್ಥಿತಿಗಳು ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ತಮ್ಮ ಸ್ಥಳಗಳಿಗೆ ಹೋಗುವ ಜನರ ಮೇಲೆ ಪರಿಣಾಮ ಬೀರುತ್ತದೆ ಇದಕ್ಕೆ ಅವಕಾಶ ನೀಡಬಾರದು, ಪ್ರತಿಭಟನಾಕಾರರು ಪೊಲೀಸರ ಕಡೆಗೂ ಗಮನಹರಿಸುತ್ತಿಲ್ಲ, ರಾಜಕೀಯ ಪಕ್ಷಗಳು ಜನರಿಗಾಗಿ ಕೆಲಸ ಮಾಡಬೇಕು, ನಮಗೆ ತೊಂದರೆ ಕೊಡಬಾರದು, ಇಂಧನ ಬೆಲೆ ಏರಿಕೆ ಆಗಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಇದರ ವಿರುದ್ಧ ಪ್ರತಿಭಟಿಸುವ ವಿಧಾನ ಇದಲ್ಲ. ಇಂತಹ ಪ್ರತಿಭಟನೆಯಿಂದ ಬೆಲೆ ಇಳಿಕೆಯಾಗುವುದೇ? ನಮ್ಮ ನಾಯಕರು ಸ್ವಲ್ಪ ಹೆಚ್ಚಿನ ಪ್ರಬುದ್ಧತೆ ತೋರಿಸಬೇಕಲ್ಲವೇ,’’ ಎಂದು ಉದ್ರೇಕಗೊಂಡ ಜೋಜು ಮಾಧ್ಯಮಗಳಿಗೆ ತಿಳಿಸಿದರು.
“ನಾವು ಕೀಮೋ ಚಿಕಿತ್ಸೆಗಾಗಿ ರೋಗಿಯೊಂದಿಗೆ ಆಸ್ಪತ್ರೆಗೆ ಹೋಗುತ್ತಿದ್ದೇವೆ. ವಾಹನದಲ್ಲಿ ಮಕ್ಕಳಿದ್ದಾರೆ” ಎಂದು ಪಕ್ಕದಲ್ಲಿದ್ದವರು ಪ್ರತಿಕ್ರಿಯಿಸಿದ್ದಾರೆ.
ಮಹಿಳಾ ನಾಯಕಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಜೋಜು ವಿರುದ್ಧ ಕಾಂಗ್ರೆಸ್ ಜಿಲ್ಲಾ ನಾಯಕತ್ವ ದೂರು ದಾಖಲಿಸಿದೆ. ಜೋಜು ಕುಡಿದಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಮುಹಮ್ಮದ್ ಶಿಯಾಸ್ ಆರೋಪಿಸಿದ್ದಾರೆ.
ಇಂಧನ ಬೆಲೆ ಏರಿಕೆ ವಿರೋಧಿಸಿ ಎಡಪ್ಪಳ್ಳಿ-ವೈಟ್ಟಿಲ ಬೈಪಾಸ್‌ಗೆ ಕಾಂಗ್ರೆಸ್ ತಡೆ ಒಡ್ಡಿತ್ತು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಸಿಪಿಎಂ ನೇತೃತ್ವದ ರಾಜ್ಯ ಸರ್ಕಾರ ಈ ಏರಿಕೆಗೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.




