ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣ: ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಸಚಿವನ ಬಂಧನ
ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣ ಸಂಬಂಧ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಎಚ್. ನಾಗರಾಜ್ ಅವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಾರ್ಚ್ 14ರಂದು ನಡೆದಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯ 18 ಪ್ರಶ್ನೆಗಳು, ಪರೀಕ್ಷೆಗೂ ಮುನ್ನ ಸೋರಿಕೆಯಾಗಿವೆ’ ಎಂಬುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರು ದೂರು ನೀಡಿದ್ದರು.
ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದ ಆರೋಪದಡಿ ಅತಿಥಿ ಉಪನ್ಯಾಸಕಿ ಆರ್. ಸೌಮ್ಯಾ ಅವರನ್ನು ಇತ್ತೀಚಿಗೆಷ್ಟೇ ಬಂಧಿಸಿದ್ದರು.
ಮೈಸೂರಿನ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾದ ಸೌಮ್ಯಾ, ಮಾನಸಗಂಗೋತ್ರಿಯಲ್ಲಿ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ಎಚ್. ನಾಗರಾಜ್ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುತ್ತಿದ್ದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ನಡೆಸಲು ಅಗತ್ಯವಾದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಗಳನ್ನು ಸಿದ್ಧಪಡಿಸಲು ನಾಗರಾಜ್ ಅವರಿಗೆ ಕೆಇಎ ಕೋರಿತ್ತು. ಅದರಂತೆ ನಾಗರಾಜ್ ಅವರು ಪ್ರಶ್ನೆಗಳನ್ನು ಸಿದ್ದಪಡಿಸಿ ನೀಡಿದ್ದರು. ಅದೇ ಪ್ರಶ್ನೆಗಳೇ ಸೋರಿಕೆಯಾದ ಮಾಹಿತಿ ತನಿಖೆಯಿಂದ ಪತ್ತೆಯಾಗಿತ್ತು.





