ಗ್ರಾಮ ದೇವತೆಯ ಪೂಜೆಗಾಗಿ ಹೊಳೆಯಿಂದ ನೀರು ತರಲು ಹೋದ ಯುವಕ ಸಾವು
ಹುನಗುಂದ : ಗ್ರಾಮ ದೇವತೆಯ ಪೂಜೆಗಾಗಿ ಹೊಳೆಯಿಂದ ನೀರು ತರಲು ಹೋದ ಯುವಕ ಈಜು ಬರದೇ ಮಲಪ್ರಭೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಹುನಗುಂದ ತಾಲೂಕಿನ ಗಂಗೂರ ಗ್ರಾಮದಲ್ಲಿ ನಡೆದಿದೆ.
ಶಿವಸಂಗಪ್ಪ ಮುದ್ದಣ್ಣ ಚೌಡಾಪೂರ (29) ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ.
ಮುಂಗಾರು ಬಿತ್ತನೆಯ ಪೂರ್ವದಲ್ಲಿ ಸಮೃದ್ದಿ ಮಳೆ ಮತ್ತು ಬೆಳೆಗಾಗಿ ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮ ದೇವತಿಗಳನ್ನು ಶಾಂತಗೊಳಿಸಲು ಮಂಗಳವಾರ ಮತ್ತು ಶುಕ್ರವಾರ ಐದು ವಾರಗಳ ಪರಿಯಂತ ಮಡಿಯುಡಿಯಿಂದ ಹೊಳೆಯಿಂದ ನೀರು ತಂದು ಗ್ರಾಮ ದೇವತೆಗಳ ಪೂಜಿಸುವುದು ವಾಡಿಕೆ ಅದರಂತೆ ಗಂಗೂರ ಗ್ರಾಮದಲ್ಲಿ ಕಳೆದ ನಾಲ್ಕು ವಾರಗಳಿಂದ ಹೊಳೆಯ ನೀರಿನಿಂದ ಗ್ರಾಮದ ದೇವತೆಗೆ ಪೂಜೆಸುತ್ತಾ ಬಂದಿದ್ದರು.
ಆದರೆ ನಾಲ್ಕನೆಯ ವಾರದ ಮಂಗಳವಾರ ದೇವತೆಗೆ ಹೊಳೆಯ ನೀರು ತರಲು ಗ್ರಾಮಸ್ಥರು ಮಲಪ್ರಭೆ ನದಿಗೆ ಹೋದಾಗ ಈಜು ಬರುವ ಯುವಕರು ನದಿಗೆ ಹಾರಿದ್ದಾರೆ ಅದನ್ನು ಕಂಡ ಮೃತ ಯುವಕ ಶಿವಸಂಗಪ್ಪ ಚೌಡಾಪೂರ ಪ್ಲಾಸ್ಟಿಕ್ ಕೊಡವನ್ನು ಹೊಟ್ಟೆಗೆ ಇಟ್ಟುಕೊಂಡು ನದಿಗೆ ಹಾರಿದ್ದಾನೆ.
ಪ್ಲಾಸ್ಟಿಕ್ ಕೊಡದ ಮೇಲೆ ಈಜುತ್ತಾ ಮುಂದೆ ಹೋದಂತೆ ಪ್ಲಾಸ್ಟಿಕ್ ಕೊಡವು ನೀರು ತುಂಬಿಕೊಂಡು ಯುವಕನ ಕೈಗೆ ಸಿಗದೇ ಹೋಗಿದೆ ಆಗ ಈಜು ಬರದೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.





