ಲೋನ್ ಕೊಡಿಸುವ ನೆಪದಲ್ಲಿ ಆನ್‌ಲೈನ್‌ನಲ್ಲಿ ವಂಚನೆ: ನಾಲ್ವರು ಆರೋಪಿಗಳ ಬಂಧನ
ಬೆಂಗಳೂರು: ಲೋನ್ ಕೊಡಿಸುವ ನೆಪದಲ್ಲಿ ಆನ್‌ಲೈನ್‌ನಲ್ಲಿ ಕರೆ ಮಾಡಿ ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಈಶಾನ್ಯ ವಿಭಾಗದ ಸಿಎನ್ ಎನ್ ಪೊಲೀಸರು ಭೇದಿಸಿದ್ದು ನಾಲ್ವರು ವಂಚಕರನ್ನು ಬಂಧಿಸಿದ್ದಾರೆ.
ಪೀಣ್ಯ ನಿವಾಸಿ ಸತೀಶ್ (24), ಮಧನಾಯ್ಕನಹಳ್ಳಿಯ ನಿವಾಸಿ ಉದಯ್ (24), ಗವಿಪುರಂ ಎಕ್ಸ್‌ಟೇಷನ್‌ನ ಜಯರಾಮ್ (33) ಹಾಗೂ ಚಿಕ್ಕಗೊಲ್ಲರಹಟ್ಟಿಯ ವಿನಯ್ (26) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ ಅನೂಪ್ ಎ.ಶೆಟ್ಟಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಿಂದ 1.5 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್, 7 ಸಿಮ್ ಕಾರ್ಡನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಗ್ರಾಹಕರಿಗೆ ಕರೆ ಮಾಡಿ ತಾವು ಟಾಟಾ ಕ್ಯಾಪಿಟಲ್‌ನ ಲೋನ್ ಡಿಪಾರ್ಟ್‌ಮೆಂಟ್‌ನಿಂದ ಕರೆ ಮಾಡುತ್ತಿದ್ದು, ನಿಮಗೆ ಬ್ಯುಸಿನೆಸ್ ಗೆ ಸಾಲ ಕೊಡುತ್ತೇವೆ ಎಂದು ನಂಬಿಸುತ್ತಿದ್ದರು.
ಜತೆಗೆ ಮೊದಲು ಅಪ್ಲಿಕೇಷನ್ ಚಾರ್ಜ್ ಎಂದು 1 ಸಾವಿರ ರೂ. ಪಡೆಯುತ್ತಿದ್ದರು. ಬಳಿಕ 18 ಲಕ್ಷ ರೂ.ಲೋನ್‌ಗೆ 23 ಸಾವಿರ ರೂ. ಸಂಸ್ಥೆಯ ಶುಲ್ಕ ಹಾಗೂ 32 ಸಾವಿರ ರೂ. ತೆರಿಗೆ ಎಂದು ನಂಬಿಸಿ ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.




