ಪ್ರೀತಿಸಿ ಮದುವೆಯಾಗಿ 10 ದಿನದಲ್ಲಿ ದೂರವಾದ ಪತಿ: ಪತ್ನಿಯಿಂದ ನ್ಯಾಯಕ್ಕಾಗಿ ಮೊರೆ
ಚಾಮರಾಜನಗರ: ಪ್ರೇಮ ವಿವಾಹವಾಗಿ 10 ದಿನಗಳ ನಂತರ ಒಡವೆ ಹಾಗೂ ಹಣವನ್ನು ಪಡೆದು ನಂತರ ಪತಿ ತನ್ನಿಂದ ದೂರವಾಗಿ ಮೋಸ ಮಾಡಿದ್ದಾರೆ ಎಂದು ತಾಲ್ಲೂಕಿನ ಮೂಕನಪಾಳ್ಯದ ಯುವತಿ ನದಿಯಾ ಬಾಯಿ ಅವರು ಆರೋಪಿಸಿದ್ದಾರೆ.
ತಮ್ಮ ಕುಟುಂಬದ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಮಹಿಳಾ ಠಾಣೆಗೆ ದೂರು ನೀಡಿದರೂ ನಮಗೆ ನ್ಯಾಯ ಸಿಕ್ಕಿಲ್ಲ. ಗಂಡನೊಂದಿಗೆ ಬಾಳುವುದಕ್ಕೆ ನನಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.
ಪ್ರೇಮಿಸಿ ಮದುವೆ: ಯುವತಿಯ ಸೋದರ ಮಾವ ಬಾಲಾಜಿ ನಾಯಕ ಅವರು ಮಾತನಾಡಿ, ‘ಮೂಕನಪಾಳ್ಯ ಗ್ರಾಮದ ಛಲಪತಿ ಎಂಬ ಯುವಕ ಹಾಗೂ ನನ್ನ ಅಕ್ಕನ ಮಗಳು ನದಿಯಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ನಮಗೆ ತಿಳಿಸದೇ ನದಿಯಾ ಛಲಪತಿಯನ್ನು ಮದುವೆಯಾಗಿದ್ದಾಳೆ.
10 ದಿನಗಳ ಕಾಲ ಚೆನ್ನಾಗಿ ನೋಡಿಕೊಂಡಿದ್ದಾರೆ. ನನ್ನ ಅಕ್ಕ ಅಪಘಾತದಲ್ಲಿ ಮೃತಪಟ್ಟಿದ್ದಳು. ಪರಿಹಾರವಾಗಿ ಬಂದ ₹5 ಲಕ್ಷ ನದಿಯಾ ಬಳಿ ಇತ್ತು. ಆಕೆಯ 40 ಗ್ರಾಂ ಚಿನ್ನ ಹಾಗೂ ಹಣವನ್ನು ಪಡೆದ ನಂತರ, ಎಚ್.ಡಿ.ಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾನೆ. ನದಿಯಾ ಕರೆ ಮಾಡಿ ತಿಳಿಸಿದಾಗ ನಮಗೆ ಎಲ್ಲ ವಿಷಯ ಗೊತ್ತಾಗಿದೆ. ಈಗ ಆಕೆಯೊಂದಿಗೆ ಬಾಳಲು ಛಲಪತಿ ಒಪ್ಪುತ್ತಿಲ್ಲ. ಗರ್ಭಿಣಿಯಾಗಿದ್ದ ಈಕೆಯ ಗರ್ಭಪಾತವನ್ನೂ ಮಾಡಿಸಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಬೇಕು’ ಎಂದರು.
ಎಂಟು ತಿಂಗಳ ಪರಿಚಯ: ನದಿಯಾ ಮಾತನಾಡಿ, ‘ನಾನು ತಿರುಪ್ಪುರ್‌ನಲ್ಲಿ ಕೆಲಸದಲ್ಲಿದ್ದೆ. ಎಂಟು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಛಲಪತಿಯ ಪರಿಚಯ ಆಗಿತ್ತು. ಆ ಬಳಿಕ ನಾವು ಪ್ರೀತಿಸುವುದಕ್ಕೆ ಆರಂಭಿಸಿದೆವು.
ನನ್ನ ಮನೆಯವರಿಗೆ ತಿಳಿಸದೆ ಏ.2ರಂದು ಅವರ ಮನೆಯಲ್ಲಿ ಮದುವೆಯೂ ಆಯಿತು. ಚಿನ್ನ, ಹಣ ತೆಗೆದುಕೊಂಡಿದ್ದಾರೆ. ಈಗ ನಾನು ಬೇಡ ಎನ್ನುತ್ತಿದ್ದಾರೆ. ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನನಗೆ ದುಡ್ಡು ಚಿನ್ನ ಬೇಡ. ಅವರ ಜೊತೆಯಲ್ಲಿ ಬಾಳಲು ಅವಕಾಶ ಮಾಡಿಕೊಡಬೇಕು’ ಎಂದರು.




