ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಪೊಲೀಸ್ ಪೇದೆ ಸಾವು
ನವದೆಹಲಿ: ಚಲಿಸುತ್ತಿದ್ದ ರೈಲು ನೋಡಿ ಮೂರ್ಛೆ ಹೋದ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಅದೇ ರೈಲಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ ಆಗ್ರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವಂತೆ ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರು ಖಾಲಿ ಪ್ಲಾಟ್‌ಫಾರ್ಮ್‌ನಲ್ಲಿ ಆರಾಮವಾಗಿ ನಿಂತಿರುತ್ತಾರೆ. ಈ ವೇಳೆ ಪಕ್ಕದ ಹಳಿ ಮೇಲೆ ಗೂಡ್ಸ್ ರೈಲು ಆಗಮಿಸುತ್ತದೆ. ಕೊಂಚ ಹೊತ್ತು ಆ ಕಡೆ ನೋಡದ ಪೇದೆ ಬಳಿಕ ಚಲಿಸುತ್ತಿದ್ದ ರೈಲನ್ನು ನೋಡುತ್ತಾರೆ.
ಚಲಿಸುತ್ತಿದ್ದ ರೈಲು ನೋಡುತ್ತಲೇ ಅವರು ಮೂರ್ಛೆ ಬಂದು ತಲೆ ಸುತ್ತಿ ತಮ್ಮ ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ. ನೋಡ ನೋಡುತಲ್ಲೇ ಸುತ್ತುತ್ತಾ ಹೋಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬೀಳುತ್ತಾರೆ.
ಪಕ್ಕದಲ್ಲೇ ಇದ್ದ ವ್ಯಕ್ತಿ ಆಘಾತದಿಂದ ಹಾಗೇ ನೋಡುತ್ತಲೇ ಇರುತ್ತಾನೆ. ದೂರದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ನೋಡಿ ಓಡಿ ಬರುತ್ತಾರೆಯಾದರೂ ಅಷ್ಟು ಹೊತ್ತಿಗಾಗಲೇ ಪೇದೆ ರೈಲಿನ ಕೆಳಗೆ ಬಿದ್ದಿರುತ್ತಾರೆ.




