ಬಂಟ್ವಾಳ ಸಹಿತ ಕರಾವಳಿಯ ವಿವಿಧೆಡೆ ಭಾರೀ ಮಳೆ
ಮಂಗಳೂರು ಅಕ್ಟೋಬರ್ 05: ಮುಂಗಾರು ಮಳೆಯ ಋತು ಮುಗಿಯುವ ಹಂತದಲ್ಲಿ ಇದೀಗ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗಿದೆ. ಮುಂಜಾನೆಯಿಂದಲೇ ಗುಡುಗು ಸಿಡಿಲು ಸಹಿತ ಮಳೆ ಆರಂಭವಾಗಿದೆ.
ಇಂದು ಬೆಳಗಿನ ಜಾವದಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ಬೆಳಗ್ಗೆಯಿಂದಲೇ ಇಡೀ ಪರಿಸರದಲ್ಲಿ ಕತ್ತಲು ಆವರಿಸಿದ್ದು, ನಿರಂತರ ಮಳೆ ಸುರಿಯುತ್ತಿದೆ.
ಭಾರಿ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೊಂದರೆ ಅನುಭವಿಸುವಂತಾಗಿದೆ. ಹಲವು ಕಡೆ ಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯ ವಿವಿಧೆಡೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೂ ಮಳೆಯ ಪರಿಣಾಮ ಕಂಡುಬಂದಿದೆ.





