ದೇಶದೆಲ್ಲೆಡೆ ಸಂಘಪರಿವಾರ ನಡೆಸಿದ ಗಲಭೆ ವಿರೋಧಿಸಿ ಪಾಪ್ಯುಲರ್ ಫ್ರಂಟ್ ಚಿಕ್ಕಮಗಳೂರು ಪ್ರತಿಭಟನೆ
ಚಿಕ್ಕಮಗಳೂರು: ರಾಮನವಮಿಯ ಶೋಭೆಯಾತ್ರೆಯ ನೆಪದಲ್ಲಿ ಸಂಘಪರಿವಾರ ಮುಸ್ಲಿಮರನ್ನು ಗುರಿಯಾಗಿಸಿ ದೇಶದೆಲ್ಲೆಡೆ ನಡೆಸಿದ ಹಿಂಸಾಚಾರ ಮತ್ತು ಗಲಭೆಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚಿಕ್ಕಮಗಳೂರು ನಗರ ಸಮಿತಿ ವತಿಯಿಂದ ನಗರದ ಆಝಾದ್ ಪಾರ್ಕ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಚಾಂದ್ ಪಾಷ ರವರು ದೇಶದಲ್ಲಿ ರಾಮನವಮಿಯ ನೆಪವಾಗಿಟ್ಟುಕೊಂಡು ರ್ಯಾಲಿ ಮಾಡಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಬೆಂಕಿ ಹಚ್ಚಿ, ಮಸೀದಿಗೆ ಬೆಂಕಿ ಹಚ್ಚಿ, ದಾಂಧಲೆ ನಡೆಸಿರುವ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಬೇಕು,
ಹಾಗೂ ಖುರಾನ್ ನ ಆಯತ್ ಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸಿ.ಟಿ ರವಿ ರವರು ಈ ತಕ್ಷಣ ಮುಸ್ಲಿಂ ಸಮುದಾಯಕ್ಕೆ ಕ್ಷಮೆ ಕೇಳಬೇಕು ಮತ್ತು ಮುಂದಿನ ದಿನಗಳಲ್ಲಿ ಸಂಘಪರಿವಾರ ಪ್ರೇರಿತ ಗೂಂಡಾಗಳು ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸಿದರೆ ಅದನ್ನು ಪ್ರತಿರೋಧಿಸಲು ಪಿಎಫ್ಐ ಸಜ್ಜಾಗಿದೆ ಎಂದು ಹೇಳಿದರು.
SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮೀಲ್ ಖಾನ್ ಮಾತನಾಡಿ ಪೂರ್ವಯೋಜಿತವಾಗಿ ಸಂಘಪರಿವಾರ ನಡೆಸಿದ ಈ ಗಲಭೆಯನ್ನು ನಿಯಂತ್ರಿಸುವಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪಿಎಫ್ಐ ಚಿಕ್ಕಮಗಳೂರು ವಲಯ ಕಾರ್ಯದರ್ಶಿ ಮುಬಾರಕ್ ಮಾತನಾಡಿ ಪ್ರಸಕ್ತ ಗಲಭೆಯಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಬಂಧಿಸಲಾಗಿದ್ದು, ನೂರಾರು ಮನೆಗಳನ್ನು ಧ್ವಂಸಗೈಯ್ಯಲಾಗಿದೆ. ಗಲಭೆಯ ಹಿಂದಿರುವ ಕಾಣದ ಕೈಗಳನ್ನು ಕಾನೂನು ಕ್ರಮ ಜರುಗಿಸಬೇಕು. ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ದಲಿತಪರ ಹೋರಾಟಗಾರ ರಾದ ಅಂಗಡಿ ಚಂದ್ರು, ಇಮಾಮ್ ಕೌನ್ಸಿಲ್ ನ ಜುನೇದ್ ಮೌಲಾನ ರವರು ಮಾತನಾಡಿದರು.
ಈ ಸಂಧರ್ಭದಲ್ಲಿ ಪಿಎಫ್ಐ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಝಮಿರ್ ಬಾಷ,
ಹಾಗೂ ಇನ್ನಿತರರು ಉಪಸ್ಥಿತರಿದ್ದರು.




