ಮುಸಲ್ಮಾನ ಬಾಂಧವರಲ್ಲಿ ರಂಜಾನ್ ತಿಂಗಳ ಮಹತ್ವ
ಹಸೈನಾರ್ ಜಯನಗರ: ವಿಶ್ವದಾದ್ಯಂತವಿರುವ ಮುಸಲ್ಮಾನ ಬಾಂಧವರಿಗೆ ಪವಿತ್ರ ರಂಜಾನ್ ತಿಂಗಳು ಏಕಕಾಲದಲ್ಲಿ ಉಪವಾಸ ವೃತವನ್ನು ಆಚರಿಸುವ ತಿಂಗಳಾಗಿದೆ.
ಅರೇಬಿಕ್ ತಿಂಗಳ 12 ತಿಂಗಳಲ್ಲಿ ರಂಜಾನ್ ತಿಂಗಳು ಅತ್ಯಂತ ಶ್ರೇಷ್ಠ ಸ್ಥಾನವನ್ನುಪಡೆದುಕೊಂಡಿದೆ.
ರಂಜಾನ್ ತಿಂಗಳ ಮಹತ್ವವನ್ನು ಮನುಷ್ಯನು ತನ್ನ ಜೀವನದಲ್ಲಿ ಸಂಭವಿಸಿರಬಹುದಾದ ತಪ್ಪುಗಳನ್ನು ಅವನ ಆರಾಧ್ಯ ದೈವ ಅಲ್ಲಾಹನೊಂದಿಗೆ ಕ್ಷಮೆಯನ್ನು ಯಾಚಿಸಿ ಉತ್ತಮ ಸನ್ಮಾರ್ಗದತ್ತ ಜೀವನಕ್ಕೆ ಪ್ರತಿಜ್ಞೆಯನ್ನು ಸ್ವೀಕರಿಸುವ ಮಾಸವಾಗಿದೆ.
ಅದೇ ರೀತಿ ಮುಸಲ್ಮಾನರ ಪವಿತ್ರ ಗ್ರಂಥವಾದ ಖುರುಹಾನ್ ಭೂಮಿಗೆ ಅವತರಿಸಿದ ಮಾಸವಾಗಿದೆ.
ಈ ಒಂದು ರಮ್ಜಾನ್ ತಿಂಗಳಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿಯು ಇಡೀ ತಿಂಗಳನ್ನು ಅಲ್ಲಾಹನ ಆರಾಧನೆ ಮತ್ತು ಪ್ರಾರ್ಥನೆಯೊಂದಿಗೆ ಕಳೆಯಲು ಬಯಸುವ ದಿನಗಳಾಗಿರುತ್ತದೆ.
ರಮ್ಜಾನ್ ತಿಂಗಳ ಆರಂಭದ ಮೊದಲ 2 ತಿಂಗಳಲ್ಲಿಯೇ ಈ ತಿಂಗಳ ಬರುವಿಕೆಯನ್ನು ಸ್ವಾಗತಿಸುವ ಮತ್ತು ರಂಜಾನ್ ತಿಂಗಳ ಪುಣ್ಯ ಕಾರ್ಯವನ್ನು ಮಾಡಲು ಅಲ್ಲಾಹನಲ್ಲಿ ಅನುಗ್ರಹವನ್ನು ಬೇಡುವ ಕಾರ್ಯವನ್ನು ಮಾಡಿಕೊಂಡಿರುತ್ತಾರೆ.
ರಂಜಾನ್ ತಿಂಗಳ ಚಂದ್ರದರ್ಶನ ಆರಂಭಗೊಂಡ ಮೊದಲ ದಿನದಿಂದಲೇ ಪ್ರತಿದಿನ ರಾತ್ರಿ ನಿರ್ವಹಿಸುವ ನಮಾಜಿನ ಬಳಿಕ ರಂಜಾನಿನ ಪ್ರತ್ಯೇಕ ಸುನ್ನತ್ ನಮಾಝ್ ಗಳಲ್ಲಿ ಒಂದಾದ ತರಾವೀಹ್ ನಮಾಜನ್ನು ಅತ್ಯಂತ ಭಯಭಕ್ತಿಯಿಂದ ಪ್ರತಿಯೊಬ್ಬ ಮುಸಲ್ಮಾನರು ಮಾಡಲು ಬಯಸುತ್ತಾರೆ.
ಬೆಳಿಗ್ಗಿನ ಜಾವ 4:00 ಗಂಟೆಯ ಸಮಯಕ್ಕೆ ಮನೆಮಂದಿ ಎಲ್ಲಾರೂ ನಿದ್ರೆಯಿಂದ ಎದ್ದು ಉಪವಾಸ ವೃತಾಚರಣೆಯ ಪ್ರತಿಜ್ಞೆಯನ್ನು ನೆರವೇರಿಸಿ ಉಪಹಾರ ಸೇವನೆ ಗಳನ್ನು ನಿರ್ವಹಿಸಿ ಬೆಳಗ್ಗಿನ 5 ಗಂಟೆಯ ಒಳಗಾಗಿ ಉಪಹಾರ ಸ್ವೀಕಾರವನ್ನು ಕೊನೆಗೊಳಿಸಿ ವೃತಾಚರಣೆಯಲ್ಲಿ ತೊಡಗಿಕೊಳ್ಳುತ್ತಾನೆ.
ನಂತರ ದಿನದ ಐದು ಹೊತ್ತಿನ ನಮ್ ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವುದು, ಕುರುಹಾನ್ ಪಾರಾಯಣಮಾಡುವುದು, ಪೈಗಂಬರ್ ರವರ ಮೇಲೆ ಸ್ವಲಾತ್ ನಿರ್ವಹಿಸುವುದು, ಬಡವರಿಗೆ ದಾನ ಧರ್ಮವನ್ನು ನೀಡುವುದು, ಈ ರೀತಿ ಸತ್ಕರ್ಮಗಳನ್ನು ಮುಂದುವರಿಸಿ ಸೂರ್ಯಾಸ್ತಮದ ವೇಳೆ ತನ್ನ ಉಪವಾಸ ವೃತವನ್ನು ತೆರವುಗೊಳಿಸಿ ಅಲ್ಲಾಹನಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ತನ್ನ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾನೆ.
ಮುಸಲ್ಮಾನ ಬಾಂಧವರಲ್ಲಿ ಕಡ್ಡಾಯವಾಗಿ ಈ ಭೂಲೋಕದ ಜೀವನದ ನಂತರ ಮರಣಾನಂತರದ ಜೀವನವು ಕಡ್ಡಾಯವಾಗಿ ಇದೆ ಎಂಬ ವಿಶ್ವಾಸ ಪ್ರತಿಯೊಬ್ಬರಲ್ಲಿಯೂ ಅಡಗಿಕೊಂಡಿದೆ.
ಭೂಮಿಯಲ್ಲಿ ಅನ್ಯಾಯವನ್ನು ಮಾಡಿ ತನ್ನ ಧರ್ಮದ ನಿಯಮವನ್ನು ಪಾಲಿಸದೆ ಅಲ್ಲಾಹನನ್ನು ಆರಾಧಿಸಿದೆ ಉತ್ತಮ ಮನುಷ್ಯನಾಗಿ ಜೀವಿಸದೆ ಮರಣ ಹೊಂದಿದಲ್ಲಿ ನರಕ ಅಗ್ನಿ ಅವನಿಗಾಗಿ ಕಾದಿದೆ ಎಂಬ ದೃಢ ವಿಶ್ವಾಸ ಅವನಲ್ಲಿ ಇರುತ್ತದೆ.
ಈ ಎಲ್ಲಾ ಕಾರಣಗಳಿಂದ ಒಬ್ಬ ಮುಸಲ್ಮಾನನು ಪವಿತ್ರ ರಂಜಾನ್ ತಿಂಗಳನ್ನು ತಾನು ಮಾಡಿದ ತಪ್ಪಿನ ಕ್ಷಮೆ ಕೇಳುವ, ಮತ್ತು ಮುಂದಿನ ಜೀವನವನ್ನು ಉತ್ತಮ ಜೀವನ ರೂಪಿಸಿಕೊಳ್ಳುವ ತಿಂಗಳಾಗಿ ರಂಜಾನ್ ತಿಂಗಳ ಪವಿತ್ರತೆಯನ್ನು ಅರಿತುಕೊಂಡಿರುತ್ತಾರೆ.
ಈ ಸಂದರ್ಭಗಳಲ್ಲಿ ಈ ತಿಂಗಳ ಪ್ರತಿಯೊಂದು ದಿನಗಳು ಕೂಡ ಮುಸಲ್ಮಾನರಿಗೆ ಹಬ್ಬದ ವಾತಾವರಣವನ್ನು ನೀಡಿರುತ್ತದೆ.
ಹಿರಿಯರೊಂದಿಗೆ ಪುಟಾಣಿ ಮಕ್ಕಳು ಕೂಡ ರಂಜಾನ್ ವೃತಾಚರಣೆಯನ್ನು ಮಾಡಿ ಸಂಜೆ ವೇಳೆ ವೃತವನ್ನು ಮುರಿಯುವ ಸಂದರ್ಭ ಮನೆಯವರು ಸಿದ್ಧಪಡಿಸಿರುವಂತಹ ವಿವಿಧ ರೀತಿಯ ಸ್ವಾದಭರಿತ ಖಾದ್ಯಗಳನ್ನು ಸೇವಿಸುವ ತವಕದಲ್ಲಿ ಇರುತ್ತಾರೆ.
ರಂಜಾನ್ ತಿಂಗಳ ಕೊನೆಯಾಗುವ ಸಮಯದಲ್ಲಿ ಪ್ರತಿಯೊಂದು ಮುಸಲ್ಮಾನನ ಮನಸ್ಸಿನಲ್ಲಿ ರಂಜಾನ್ ಹಬ್ಬದ ಆಚರಣೆಯ ಬಗ್ಗೆ, ಹೊಸ ಹೊಸ ಉಡುಪುಗಳನ್ನು ಧರಿಸಿ ಹಬ್ಬದ ದಿನದಂದು ಕುಟುಂಬಸ್ಥರನ್ನು ಕಂಡು ಪರಸ್ಪರ ಶುಭಾಶಯಗಳನ್ನು ಹಂಚುವ ಸಂಭ್ರಮದ ದಿನಕ್ಕಾಗಿ ಕಾಯುತ್ತಿರುತ್ತಾರೆ.
ಈ ರಂಜಾನ್ ತಿಂಗಳ ಉಪವಾಸ ವೃತವನ್ನು ಮುರಿಯುವ (ಇಫ್ತಾರ್ ಸಮಯದಲ್ಲಿ)ವಿವಿಧ ರೀತಿಯ ಹಣ್ಣು-ಹಂಪಲುಗಳು, ರಾಗಿ ಗೋಧಿ ಅಕ್ಕಿ ಮುಂತಾದ ಧಾನ್ಯಗಳಿಂದ ಸಿದ್ಧಪಡಿಸಿದ ದ್ರವರೂಪದ ಖಾದ್ಯಗಳನ್ನು, ಸಮೋಸ, ಬೋಂಡಾ, ರೋಲ್, ಹಲೀಮ್, ಮುಂತಾದ ಮಸಾಲೆಭರಿತ ಖಾದ್ಯಗಳನ್ನು, ವಿವಿಧ ಹಣ್ಣುಗಳಿಂದ ಮಾಡಿರುವಂತಹ ಜ್ಯೂಸ್ ಗಳನ್ನು ಸಿದ್ಧಪಡಿಸಿ ಕೊಂಡಿರುತ್ತಾರೆ. ಪ್ರಮುಖವಾಗಿ ಈ ಸಂದರ್ಭದಲ್ಲಿ ಕರ್ಜೂರ ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.
ಈ ರೀತಿಯಾಗಿ ರಂಜಾನ್ ತಿಂಗಳ ಅನುಭವವನ್ನು ಆರಾಧನೆ ಮತ್ತು ವೃತಾಚರಣೆ ಮೂಲಕ ಪೂರ್ತಿಗೊಳಿಸಲು ಪ್ರತಿಯೊಬ್ಬ ಮುಸಲ್ಮಾನನು ಆಸಕ್ತಿ ವಹಿಸುವ ದಿನವಾಗಿದೆ ರಂಜಾನ್.
ರಂಜಾನ್ ಹಬ್ಬದ ದಿನದಂದು ಬಹಳ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಫಿತರ್ ದಾನವನ್ನು ನಿರ್ವಹಿಸಿ ನಂತರ ಪುರುಷರು ಮಸೀದಿಗಳಿಗೆ ತೆರಳಿ ಈದ್ ನಮಾಝ್ ಮುಗಿಸಿ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ.
ಫಿತರ್ ದಾನವೆಂದರೆ ಮನೆಯ ಪ್ರತಿಯೊಬ್ಬ ಸದಸ್ಯರ ಹೆಸರಿನಲ್ಲಿ ಅಂದಾಜು ಎರಡು ಮುಕ್ಕಾಲು ಕೆಜಿ ತೂಕದ ಧಾನ್ಯಗಳನ್ನು ಅಕ್ಕಿ, ಅಥವಾ ಗೋಧಿ, ಮುಂತಾದ ಧಾನ್ಯಗಳನ್ನು ದಾನ ನೀಡುವುದು ಫಿತರ್ ದಾನ ವಾಗಿರುತ್ತದೆ.




