March 19, 2026

ಮುಸ್ಲಿಂ ಹೆಂಗಸರನ್ನು ಅಪಹರಿಸಿ ರೇಪ್‌ ಮಾಡಲು ಕರೆ ನೀಡಿದ ಸ್ವಾಮೀಜಿ: ವಿಡಿಯೊ ವೈರಲ್‌

0
IMG-20220408-WA0001.jpg

ಉತ್ತರ ಪ್ರದೇಶ: ಮುಸ್ಲಿಂ ಹೆಂಗಸರನ್ನು ಅಪಹರಿಸಿ ರೇಪ್‌ ಮಾಡಲು ಕರೆ ನೀಡಿದ ಸ್ವಾಮೀಜಿಯ ವಿಡಿಯೊ ವೈರಲ್‌ ಆಗಿದ್ದು, ತನಿಖೆ ನಡೆಸಲು ಯುಪಿ ಪೊಲೀಸರು ಮುಂದಾಗಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು 100 ಕಿಮೀ ದೂರದಲ್ಲಿರುವ ಸೀತಾಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಮಸೀದಿಯ ಹೊರಗೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಹಿಂದೂ ಅರ್ಚಕ ಈ ರೀತಿಯ ಕರೆ ನೀಡಿದ್ದಾನೆ ಎನ್ನಲಾಗಿದೆ. ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ವೀಡಿಯೊ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೇಸರಿ ವಸ್ತ್ರಗಳನ್ನು ಧರಿಸಿದ ವ್ಯಕ್ತಿಯೊಬ್ಬರು, ಖೈರಾಬಾದ್ ಎಂಬ ಸಣ್ಣ ಪಟ್ಟಣದಲ್ಲಿ ಜೀಪಿನ ಒಳಗೆ ಕೂತು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಚೀಪಿನ ಪಕ್ಕದಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯನ್ನೂ ಕಾಣಬಹುದು.

ಮೈಕ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಮುಂದೆ “ಜೈ ಶ್ರೀ ರಾಮ್” ಎಂದು ಕೂಗುವ ದುಷ್ಕರ್ಮಿಗಳು, ಪ್ರಚೋದನಾಕಾರಿ ಮಾತುಗಳಿಗೆ ‘ಜೈ ಶ್ರೀರಾಮ್‌’ ಎಂದು ಪ್ರೋತ್ಸಾಹಿಸುತ್ತಾರೆ. ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂದು ವ್ಯಕ್ತಿಯು ಆರೋಪಿಸಿದ್ದು ಇದಕ್ಕಾಗಿ ₹ 28 ಲಕ್ಷ ಸಂಗ್ರಹಿಸಲಾಗಿದೆ ಎಂದಿದ್ದಾರೆ.

ಆ ಪ್ರದೇಶದಲ್ಲಿ ಯಾವುದೇ ಹುಡುಗಿಗೆ ಮುಸ್ಲಿಂ ಕಿರುಕುಳ ನೀಡಿದರೆ, ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಸಾರ್ವಜನಿಕವಾಗಿ ಅತ್ಯಾಚಾರ ಮಾಡುವುದಾಗಿ ಪ್ರಚೋದಿಸಲಾಗಿದೆ. ಈ ಮಾತುಗಳಿಗೆ ಯುವಕರು ಹರ್ಷೋದ್ಘಾರ ಮಾಡುತ್ತಾರೆ.

ವೀಡಿಯೋವನ್ನು ಹಂಚಿಕೊಂಡಿರುವ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್, ಈ ವೀಡಿಯೊವನ್ನು ಏಪ್ರಿಲ್ 2 ರಂದು ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೀತಾಪುರ ಪೊಲೀಸರು, “ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸತ್ಯಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಜುಬೇರ್ ಅವರ ಪೋಸ್ಟ್ ಗಮನಿಸಿರುವ ಹಲವಾರು ಟ್ವಿಟರ್ ಬಳಕೆದಾರರು ಈ ಧಾರ್ಮಿಕ ಮುಖಂಡನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಲವರು ಈತನನ್ನು “ಬಜರಂಗ ಮುನಿ” ಎಂದು ಗುರುತಿಸಿದ್ದಾರೆ. ಯುಎನ್‌ ಮಾನವ ಹಕ್ಕುಗಳ ಸಂಸ್ಥೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಕ್ರಮ ಜರುಗಿಸಬೇಕೆಂಬ ಆಗ್ರಹ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!