ಕಾರ್ಕಳ: ಬೋನಿಗೆ ಬಿದ್ದ ಚಿರತೆ: ಸಾರ್ವಜನಿಕರಲ್ಲಿ ಆತಂಕ ನಿವಾರಣೆ
ಕಾರ್ಕಳ: ಕಳೆದ ಒಂದು ವಾರದಿಂದ ಅಡ್ಡಾಡುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟುವಿನಲ್ಲಿ ನಡೆದಿದೆ.
ಚಿರತೆ ಗ್ರಾಮದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಗೆ ಬೋನು ಇಟ್ಟಿದ್ದರು. ಇದೀಗ ಚಿರತೆ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ಭಯದ ವಾತಾವರಣದಿಂದ ಹೊರಗೆ ಬಂದಿದ್ದಾರೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ನೇತೃತ್ವದಲ್ಲಿ ಪ್ರಕಾಶ್ ಚಂದ್ರ, ಅರಣ್ಯ ರಕ್ಷಕ ಎ.ಡಿ ಪೊನ್ನಪ್ಪ, ರಾಘವೇಂದ್ರ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಶಮೀಮ್, ಚಾಲಕ ಹಿತೇಶ್ ಕುಮಾರ್, ಬಾಬು ಪೂಜಾರಿ ಅವರ ಯಶಸ್ವಿ ಕಾರ್ಯಾಚರಣೆ ಮತ್ತು ಗ್ರಾಮಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಯಿತು.




