ಎಸ್ಸೆಸ್ಸೆಲ್ಸಿ(SSLC) ಪರೀಕ್ಷಾ ಕೇಂದ್ರದ ಬಳಿ ಹೆಜ್ಜೇನು ದಾಳಿ: ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿಗೆ ಗಾಯ
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ(SSLC) ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಬೆಳಿಗ್ಗೆ 9.45ರ ಸುಮಾರಿಗೆ ಹೆಜ್ಜೇನು ದಾಳಿ(Honey bee attack) ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಸೇಂಟ್ ಮೈಕಲ್ಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿ ಇಮಾಮ್ ಜಾಫರ್ ಸಾಧಿಕ್, ಶಾಲೆ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಮಹಿಳಾ ಕಾನ್ ಸ್ಟೆಬಲ್ ವಾಣಿ ಅಜಯ್ ದ್ಯಾವನೂರ, ವಿದ್ಯಾರ್ಥಿನಿ ತಾಯಿ ಭುವನೇಶ್ವರಿ ಕೆ., ಶಾಲೆ ಸಿಬ್ಬಂದಿ ಪ್ರಕಾಶ ಬಲರಾಮ ಮತ್ತು ಸುನೀತಾ ಜೋಸೆಫ್ ಗಾಯಗೊಂಡವರು ಎನ್ನಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಭುವನೇಶ್ವರಿ ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಉಳಿದವರು ಪ್ರಥಮ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.
ನಾಲ್ಕು ಅಂತಸ್ತಿನ ಶಾಲಾ ಕಟ್ಟಡದಲ್ಲಿ ಹೆಜ್ಜೇನು ಗೂಡು ಕಟ್ಟಿತ್ತು. ಸಾಕಷ್ಟು ಸಂಖ್ಯೆ ವಿದ್ಯಾರ್ಥಿಗಳು ಕೊಠಡಿಯೊಳಗೆ ತೆರಳಿದ ಬಳಿಕ ಹೆಜ್ಜೇನು ದಾಳಿ ನಡೆಸಿದೆ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.




