December 15, 2025

ವಿಟ್ಲ ಕಮ್ಯೂನಿಟಿ ಸೆಂಟರ್ ಉದ್ಘಾಟನೆ: ವಿದ್ಯಾರ್ಥಿಗಳಿಗೆ ಗುರಿ ನಿಶ್ಚಯಿಸುವ ಕಮ್ಯುನಿಟಿ ಸೆಂಟರ್

0
IMG-20220401-WA0005

ವಿಟ್ಲ: ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ಗುರಿ ನಿಶ್ಚಯಿಸುವ ವಿಟ್ಲದಲ್ಲಿ ನೂತನವಾಗಿ ಪ್ರಾರಂಭಿಸಲಾದ ವಿಟ್ಲ ಕಮ್ಯುನಿಟಿ ಸೆಂಟರ್ ವಿಟ್ಲ ಹೀರಾ ಟವರ್ ನಲ್ಲಿ ಶುಭಾರಂಭಗೊಂಡಿತು.

ನೂತನ ಸೆಂಟರ್ ಅನ್ನು ಮಹಮೂದುಲ್ ಫೈಝಿ ವಾಲೆಮುಂಡೊವು ಉಸ್ತಾದ್ ಉದ್ಘಾಟಿಸಿದರು.

ಕೌನ್ಸಿಲಿಂಗ್ ಸೆಂಟರನ್ನು ವಿಟ್ಲ ಲಯನ್ಸ್ ಕ್ಲಬ್ ನಿಕಟಪೂರ್ವ ಗವರ್ನರ್ ಡಾ. ಗೀತಾ ಪ್ರಕಾಶ್ ಉದ್ಟಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿ ನೂರಾರು ಶಾಲಾ ಕಾಲೇಜುಗಳಿದೆ, ಅಲ್ಲಿ ವಿದ್ಯಾರ್ಥಿಗಳಿಗೆ ಡಿಗ್ರಿ ಕೊಡಲಾಗುತ್ತದೆ. ಮೌಲ್ಯ ಮತ್ತು ಸಾಮಾಜಿಕ ಕಾಳಜಿ ಕೊಡಲಾಗುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಇರುವ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಆಗುತ್ತಿಲ್ಲ. ಆ ನಿಟ್ಟಿನಲ್ಲಿ ಕಮ್ಯೂನಿಟಿ ಸೆಂಟರ್ ಮಾದರಿ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಪರಿಹಾರ ಹಾಗೂ ಪ್ರೋತ್ಸಾಹ ಕೊಡುವ ಸೆಂಟರಿನ ಯೋಜನೆ ವಿಟ್ಲ ಪ್ರದೇಶದಲ್ಲಿ ಯಶಸ್ವಿಯಾಗಲಿ ಎಂದವರು ಹೇಳಿದರು.

ಇಲ್ಲಿ ಸಾಮರ್ಥ್ಯ ಇರುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಮರ್ಥ್ಯ ಇಲ್ಲದ ವಿದ್ಯಾರ್ಥಿಗಳಿಗೆ ಕೌಶಲ್ಯ ಮತ್ತು ತಂತ್ರಜ್ಞಾನ ತರಬೇತಿ ನೀಡುವುದು ಖುಷಿ ತಂದ ಯೋಜನೆ ಎಂದರು.

ಕಲ್ಲಡ್ಕ ಮಸೀದಿಯ ಖತೀಬರಾದ ಶೈಖ್ ಮಹಮ್ಮದ್ ಇರ್ಫಾನಿ ಪೈಝಿ ಯವರು ಮಾತನಾಡಿ, ಯುವಕರು ವಿದ್ಯಾಬ್ಯಾಸದಿಂದ ವಂಚಿತರಾಗುತ್ತಿದ್ದಾರೆ, ವಿದ್ಯಾರ್ಥಿನಿಯರು ಹೆಚ್ಚು ಕಲಿಯುತ್ತಿದ್ದಾರೆ.

ಈ ಅಸಮತೋಲನ ಭವಿಷ್ಯದಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಠಿಸಲಿದೆ ಹೀಗಾಗಿ ಡ್ರಾಪೌಟ್ ಆಗುವ ಯುವಕರನ್ನು ಗುರುತಿಸುವ ಕೆಲಸ ಮತ್ತು ಅವರಿಗೆ ಕೌನ್ಸಿಲಿಂಗ್ ನಡೆಸಿ ಗುರಿ ತಲುಪಿಸುವ ಪ್ರಯತ್ನ ನಡೆಯಬೇಕು ಎಂದರು.

ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ ಸೆಂಟರಿನ ಸಿಸ್ಟಂ, ಪದ್ದತಿ, ಫಾರ್ಮೆಟ್ ಮತ್ತು ಇದುವರೆಗೂ ಮಾಡಿದ ಯೋಜನೆ ನೋಡಿ ಅಚ್ಚರಿಯಾಗಿದೆ, ಇಂತಹ ಸೆಂಟರ್ ನನ್ನ ಸಾಮಾಜಿಕ ಜೀವನದಲ್ಲಿ ಎಲ್ಲೂ ನೋಡಿಲ್ಲ. ವಿದ್ಯಾರ್ಥಿಗಳನ್ನು ಮೊನಿಟರಿಂಗ್ ಮಾಡುವ ಲೆಜ್ಜರ್ ಹಾಗೂ ನಿಬಂಧನೆಗಳು ನೋಡಿ ಎಲ್ಲಾ ಕಡೆಯೂ ಇಂತಹ ಸೆಂಟರ್ ಅಗತ್ಯವಾಗಿ ಬೇಕು ಎಂದರು.

ಎಂ.ಎಸ್ ಮಹಮ್ಮದ್ ರವರು ಮಾತನಾಡಿ ಕಳೆದ ಒಂದು ವರ್ಷ ಪುತ್ತೂರಿನಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸಿದ ಸಂಸ್ಥೆ ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳಲ್ಲಿ ಇರುವ ಬೌದ್ಧಿಕ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಬೆಳೆಸುವ ಇಂತಹ ಸೆಂಟರ್, ಅವರ ವ್ಯಕ್ತಿತ್ವ ನಿರ್ಮಿಸುವ ಹಾಗೂ ಸಮಾಜಿಕ ಕಾಳಜಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸಂಚಾಲಕರಾದ ಸಲೀಂ ಹಾಜಿ ಕಬಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಬಕ ಖತೀಬರಾದ ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ವಿಟ್ಲ ಕಮ್ಯೂನಿಟಿ ಸೆಂಟರಿನ ಸಂಚಾಲಕರಾದ ಶಂಸುದ್ದೀನ್ ಬೈರಿಕಟ್ಟೆ, ಹೆಲ್ಪ್ ಲೈನ್ ನ ಡಿ.ಬಿ. ಮುಸ್ತಫಾ, ರಶೀದ್ ವಿಟ್ಲ, ವಿಷನ್ ಎಜುಕೇಶನ್ ಟ್ರಸ್ಟ್ ನ ಮಹಮ್ಮದ್ ಬ್ಯಾರಿ, ಮೋಟಿವೇಷನ್ ಟ್ರೈನರ್ ಉಮರುಲ್ ಫಾರೂಕ್ ರಝಾ ಅಮ್ಜದಿ, ಸಲೀಂ ಹಾಜಿ ಬೈರಿಕಟ್ಟೆ, ಪುತ್ತೂರು ಕಮ್ಯೂನಿಟಿ ಸೆಂಟರಿನ ಇಮ್ತಿಯಾಝ್ ಪಾರ್ಲೆ ಉಪಸ್ಥಿತರಿದ್ದರು.

ಖ್ಯಾತ ಮೊಟಿವೇಷನಲ್ ಟ್ರೈನರ್ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರೆ, ಹನೀಫ್ ಪುತ್ತೂರು ಪ್ರಸ್ತಾವಿಕ ಭಾಷಣ ಮಾಡಿದರು.

ಕಮ್ಯೂನಿಟಿ ಸೆಂಟರ್ ಕಳೆದ ಎಪ್ರಿಲ್ ನಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರಿಂದ ಪುತ್ತೂರಿನಲ್ಲಿ ಉದ್ಘಾಟನೆಗೊಂಡು ಸುಮಾರು 3500 ವಿದ್ಯಾರ್ಥಿಗಳಿಗೆ ಉತ್ತೇಜನಾ ಶಿಬಿರ, 1400 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುರಿ ನಿಶ್ಚಯಿಸುವ ಕೌನ್ಸಿಲಿಂಗ್ ಮಾಡಿದೆ. ಎಲ್ಲಾ ಧರ್ಮೀಯ 300 ವಿದ್ಯಾರ್ಥಿಗಳಿಗೆ 31 ಲಕ್ಷ ರುಪಾಯಿ ವಿದ್ಯಾರ್ಥಿ ವೇತನ ನೀಡಿದೆ. 16 ಗ್ರಾಮಾಂತರ ಟ್ವೀಷನ್ ಸೆಂಟರ್ ಮತ್ತು 100 ಕ್ಕಿಂತ ಹೆಚ್ಚು ಡ್ರಾಪೌಟ್ ಆದ ವಿದ್ಯಾರ್ಥಿಗಳನ್ನು ಮರಳಿ ಶಾಲೆ-ಕಾಲೇಜಿಗೆ ಸೇರಿಸಿದೆ. ಈಗ ಸಂಸ್ಥೆಯು ವಿಟ್ಲದ ಗ್ರಾಮೀಣ ಭಾಗದಲ್ಲಿ ತನ್ನ ಎರಡನೇ ಕೇಂದ್ರವನ್ನು ತೆರೆದಿದೆ.

Leave a Reply

Your email address will not be published. Required fields are marked *

error: Content is protected !!