ವೈರಮುಡಿ ಕಿರೀಟ ತರುವ ವಿಚಾರದಲ್ಲಿ ಗೊಂದಲ: ಜಿಲ್ಲಾ ಖಜಾನೆಗೆ ತೆರಳುತ್ತಿದ್ದ ವಾಹನಕ್ಕೆ ತಡೆ
ಮೇಲುಕೋಟೆ: ಸ್ಥಾನೀಕರು ಜಿಲ್ಲಾ ಖಜಾನೆಯಿಂದ ವೈರಮುಡಿ ಕಿರೀಟ ತಂದು ವಿಧಿ ವಿಧಾನ ಪೂರೈಸುವ ವಿಚಾರದಲ್ಲಿ ದೇವಾಲಯದ ಕೈಪಿಡಿಯ ನಿಯಮ, ಹೈಕೋರ್ಟ್ ನಿರ್ದೇಶನ, ಆಡಳಿತ ಸಮಿತಿ ತೀರ್ಮಾನಗಳನ್ನು ನಿರ್ಲಕ್ಷಿಸಿ ಒಂದನೇ ಸ್ಥಾನೀಕರನ್ನು ಮಾತ್ರ ಯಾವುದೇ ಆದೇಶ ನೀಡದೆ ಕರೆದುಕೊಂಡು ಹೋಗುತ್ತಿದ್ದ ಅಧಿಕಾರಿಗಳ ಕ್ರಮವನ್ನು 4ನೇ ಸ್ಥಾನೀಕರು ಪ್ರಶ್ನಿಸಿ ವೈರಮುಡಿ ಕಿರೀಟ ತರಲು ಜಿಲ್ಲಾ ಖಜಾನೆಗೆ ತೆರಳುತ್ತಿದ್ದ ವಾಹನ ತಡೆದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ದೇಗುಲದ ನಿಯಮಗಳು ಮತ್ತು ಸರ್ಕಾರಿ ಕಚೇರಿಯ ನಿಯಮಗಳನ್ನು ಉಲ್ಲಂಘಿಸಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸಹ ಹಾಜರಿರದೆ ವೈರಮುಡಿ ಕಿರೀಟ ತರಲು 4ನೇ ಸ್ಥಾನೀಕರನ್ನು ಕೈಬಿಟ್ಟು ಪ್ರಥಮ ಸ್ಥಾನೀಕರನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದ ಅಧಿಕಾರಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಸ್ಥಾನೀಕರ ಕುಟುಂಬ, ದೇವಾಲಯದ ಇಒರನ್ನು ಸ್ಥಳಕ್ಕೆ ಕರೆಸಿ ಒಂದನೇ ಸ್ಥಾನೀಕರಿಗೆ ಆದೇಶ ನೀಡಿ ಕರೆದುಕೊಂಡು ಹೋಗಿಲ್ಲ.
ಇಲ್ಲದಿದ್ದರೆ ದೇವಾಲಯ ಕೈಪಿಡಿಯ ನಿಯಮ ಮತ್ತು ಹೈಕೋರ್ಟ್ ನಿರ್ದೇಶನ, ಆಡಳಿತ ಸಮಿತಿಯ ತೀರ್ಮಾನದಂತೆ ಎಲ್ಲ ಸ್ಥಾನೀಕರಿಗೆ ಅವಕಾಶ ನೀಡಿ ಎಂದು ಪಟ್ಟು ಹಿಡಿದರು.




