ಸುಳ್ಯಕ್ಕೆ ಭೇಟಿ ನೀಡಿದ ಸರಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ: ಈ ವರ್ಷದಿಂದಲೇ ರಾಜ್ಯ ಸರಕಾರಿ ನೌಕರರಿಗೆ ಸಮಾನವೇತನ ಜಾರಿ ಮಾಡುವ ಭರವಸೆ
ಸುಳ್ಯ: ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನ ರಾಜ್ಯದ ಸರಕಾರಿ ನೌಕರರಿಗೆ ಸಿಗಬೇಕೆನ್ನುವ ಬೇಡಿಕೆಯನ್ನು ಸಂಘದ ವತಿಯಿಂದ ಸರಕಾರದ ಮುಂದೆ ಇರಿಸಲಾಗಿದ್ದು ಪೂರಕ ಸ್ಪಂದನ ದೊರೆತಿದೆ. ಈ ವರ್ಷವೇ ಬೇಡಿಕೆ ಈಡೇರುವ ಭರವಸೆ ಸಿಕ್ಕಿದೆ. ಆ ನಿಟ್ಟಿನಲ್ಲಿ ನಮ್ಮ ಸಂಘಟನೆಯೂ ಅದರ ಹಿಂದೆ ಇದ್ದು ಯೋಜನೆ ಜಾರಿಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.

ಇಂದು ಸುಳ್ಯಕ್ಕೆ ಭೇಟಿ ನೀಡಿದ ರಾಜ್ಯಾಧ್ಯಕ್ಷರು ಸುಳ್ಯದ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಎರಡು ಲಕ್ಷದ ಐವತ್ತೂ ಸಾವಿರದಷ್ಟು ಸರಕಾರಿ ನೌಕರರು ಇದ್ದಾರೆ. ಅವರ ಬಹುಮುಖ್ಯ ಬೇಡಿಕೆಯಾದ ಹಳೆ ಪಿಂಚಣಿ ಸ್ಕೀಂ ಸಿಗಬೇಕೆನ್ನುವ ಕೋರಿಕೆ ಈಗಾಗಲೇ ಸರಕಾರದ ಮುಂದೆ ಇಟ್ಟಿದ್ದು, ಈಡೇರಿಸುವ ಭರವಸೆ ಸಿಕ್ಕಿದೆ ಅದರ ಹಿಂದೆ ನಾವು ಹೋಗಿ ಎನ್.ಪಿ.ಎಸ್. ನೌಕರರ ಹಿತ ಕಾಪಾಡುತ್ತೇವೆ” ಎಂದು ಅವರು ವಿಶ್ವಾಸದಿಂದ ನುಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಉಪಾಧ್ಯಕ್ಷ ಬಸವರಾಜ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ಇ.ಒ. ಭವಾನಿಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ್, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಾ.ನಂದಕುಮಾರ್, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ವೇದಿಕೆಯಲ್ಲಿದ್ದರು.
ಸರಕಾರಿ ನೌಕರರ ಸಂಘದ ಸುಳ್ಯ ಶಾಖೆ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಸ್ವಾಗತಿಸಿ, ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ ವಂದಿಸಿದರು. ಶಿಕ್ಷಣ ಸಂಯೋಜಕ ವಸಂತ ಏನೆಕಲ್ ಕಾರ್ಯಕ್ರಮ ನಿರೂಪಿಸಿದರು.




