February 3, 2026

ನೀವು ಮತ್ತೆ ಸಿಎಂ ಅಗೋಕೆ ಚಾನ್ಸೇ ಇಲ್ಲ: ಸದನದಲ್ಲಿ ಮಾಜಿ ಸಿಎಂಗಳ ವಾಕ್ಸಮರ

0
IMG_20220311_213835.jpg

ಬೆಂಗಳೂರು: ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲುವು ಸಾಧಿಸಿದೆ. ಅಧಿಕಾರದ ಸನಿಹಕ್ಕೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಎಲ್ಲಿಯೂ ಅಧಿಕಾರ ಸಿಕ್ಕಿಲ್ಲ. ಗುರುವಾರ ಹೊರಬಿದ್ದ ಪಂಚರಾಜ್ಯ ಚುನಾವಣೆಯ ಫಲಿತಾಂಶ ಬಿಜೆಪಿಯೇತರ ಪಕ್ಷಗಳಲ್ಲಿ ಹೊಸ ಆತಂಕ ಶುರು ಮಾಡಿದೆ. ಫಲಿತಾಂಶದ ನಂತರ ಇಂದು ಶುಕ್ರವಾರ ನಡೆದ ರಾಜ್ಯ ವಿಧಾನಸಭೆ ಕಲಾಪದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ರೋಚಕ ವಾಕ್ಸಮರ ನಡೆದಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರ್ತಾರೆಂಬ ಬಗ್ಗೆ ಘಟಾನುಘಟಿಗಳಾದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಭಾರಿ ಮಾತಿನ ಸಮರ ನಡೆದಿದೆ.

ಮೊದಲಿಗೆ ಕಲಾಪದಲ್ಲಿ ಮಾತು ಆರಂಭಿಸಿದ ಯಡಿಯೂರಪ್ಪ, ನಿನ್ನೆ ಹೊರಬಂದ ಚುನಾವನಾ ಫಲಿತಾಂಶದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಈ ಬೆಳವಣಿಗೆ ಗಮನಿಸಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಅದರಂತೆ ಕರ್ನಾಟಕದಲ್ಲಿ ಕೂಡ ಜನರಿಗೆ ಬಿಜೆಪಿ ಪರ ಒಲವು ಇದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕನಿಷ್ಠ 130-135 ಸೀಟು ಗೆದ್ದು ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಸಾಮೂಹಿಕವಾಗಿ ನಾವು ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.

ಬಳಿಕ ಎದ್ದು ನಿಂತು ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಬಿಜೆಪಿ ವರಿಷ್ಠರು ಅನಗತ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಬೊಮ್ಮಾಯಿಯವರನ್ನು ಕೂರಿಸಿದರು. ಈ ನಿರ್ಧಾರ, ಬೆಳವಣಿಗೆ ಬಿಜೆಪಿಯಲ್ಲಿ ಬೇಕಾಗಿರಲಿಲ್ಲ. ಇಂದು ಯಡಿಯೂರಪ್ಪನವರು ಬಹಳ ನೋವಿನಿಂದ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಭಾವಿಸಿದ್ದೇನೆ ಎಂದು ವ್ಯಂಗ್ಯವಾಡಿದರು. ಅವರು ರಾಜೀನಾಮೆ ನೀಡಿದಾಗ ಕಣ್ಣೀರು ಹಾಕಿದರು. ಕಣ್ಣೀರು ಸುಮ್ಮನೆ ಬರುತ್ತದೆಯೇ, ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು 2018ರಲ್ಲಿ ಕೂಡ ಯಡಿಯೂರಪ್ಪ ಹೇಳಿದ್ದರು. 150 ಸೀಟು ಗೆಲ್ಲಿಸುತ್ತೇನೆ ಎಂದಿದ್ದರು. ಆದರೆ 2018ರಲ್ಲಿ ರಾಜ್ಯದ ಜನರು ಆಶೀರ್ವಾದ ಕೊಡಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!