September 20, 2024

ಬೆಳ್ತಂಗಡಿ: ಚಿಕ್ಕಪ್ಪನ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವು :
ಬಿಜೆಪಿ ಬೆಂಬಲಿತ ನೆರಿಯ ಪಂಚಾಯತ್ ಸದಸ್ಯನ ಬಂಧನ

0

ಬೆಳ್ತಂಗಡಿ: ಸ್ವಂತ ಚಿಕ್ಕಪ್ಪನ ಮನೆಯಿಂದ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಬಗ್ಗೆ ನೀಡಿದ ದೂರಿನಂತೆ ಬಿಜೆಪಿ ಬೆಂಬಲಿತ ನೆರಿಯ ಗ್ರಾಮ ಪಂಚಾಯತ್ ಸದಸ್ಯನೊರ್ವನ ಮೇಲೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.

ಆರೋಪಿಸಿಯನ್ನು ಬಿಜೆಪಿ ಬೆಂಬಲಿತ ನೆರಿಯ ಗ್ರಾಮ ಪಂಚಾಯತ್ ಸದಸ್ಯ , ನೆರಿಯ ಗ್ರಾಮದ ಕುಲೆನಾಡಿ ಎಂಬಲ್ಲಿ ವಾಸವಾಗಿರುವ ರಾಮಕೃಷ್ಣ ಎಂಬವರ ಪುತ್ರ ಸಚಿನ್ ಕೆ.ಆರ್ ಎಂದು ದೂರಿನಲ್ಲಿ ಹೆಸರಿಸಲಾಗಿದೆ. ಸಚಿನ್ ಎಂಬಾತನ ಚಿಕ್ಕಮ್ಮ ಚಂದ್ರಾವತಿ ಎಂಬವರು ಧರ್ಮಸ್ಥಳ ಪೋಲಿಸ್ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಜಾಮೀನು ರಹಿತ ಸೆಕ್ಷನ್ 454 , 457 , 380 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕುಲೆನಾಡಿ ಎಂಬಲ್ಲಿರುವ ಚಂದ್ರಾವತಿ ಎಂಬವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನಿಂದ ರೂಪಾಯಿ 2,47,000/- ಗಳನ್ನು ಸಾಲವಾಗಿ ಪಡೆದಿದ್ದು , ಅದರಲ್ಲಿ ರೂಪಾಯಿ 65,000/- ಹಣವನ್ನು ಕಪಾಟಿನಲ್ಲಿ ಇಟ್ಟಿದ್ದು , ಅದೇ ಕಪಾಟಿನಲ್ಲಿ 24 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಹಾಗೂ 20 ಗ್ರಾಂ ತೂಕದ ಚಿನ್ನದ ಸರವನ್ನು ಇಟ್ಟಿದ್ದರು. ಮಾರ್ಚ್ 8 ರಂದು ಬೆಳಗ್ಗೆ ಹಣದ ಅವಶ್ಯಕತೆಗಾಗಿ ಹಣವನ್ನು ತೆಗೆಯಲು ನೋಡಿದಾಗ ಚಿನ್ನಾಭರಣ ಸಹಿತ ಹಣವನ್ನು ಕಳ್ಳರು ಕಳವು ಮಾಡಿರುವುದು ತಿಳಿಯುತ್ತದೆ. ಮಾರ್ಚ್ 6 ರಿಂದ ಮಾರ್ಚ್ 8 ರ ಬೆಳಗ್ಗಿನ ನಡುವೆ ಕಳ್ಳತನ ನಡೆಸಲಾಗಿದೆ. ಈ ಬಗ್ಗೆ ಬಿಜೆಪಿ ಬೆಂಬಲಿತ ನೆರಿಯ ಗ್ರಾಮ ಪಂಚಾಯತ್ ನ ಸದಸ್ಯ ಸಚಿನ್ ಕೆ.ಆರ್ ಎಂಬಾತನ ಮೇಲೆ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳವುಗೊಂಡ ಚಿನ್ನಾಭರಣದ ಅಂದಾಜು ಮೌಲ್ಯ ರೂಪಾಯಿ 1,75,000/- ಆಗಿದ್ದು , ಹಣ ಹಾಗೂ ಚಿನ್ನಾಭರಣದ ಒಟ್ಟು ಮೌಲ್ಯ ಅಂದಾಜು 2,40,000/- ರೂಪಾಯಿ ಆಗಬಹುದು ಎಂದು ತಿಳಿಸಿದ್ದು , ಅದರಂತೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ಗೌರವಾನ್ವಿತವಾಗಿ ಬಿಡುಗಡೆ:
ಆರೋಪಿ ಸಚಿನ್ ಕೆ.ಆರ್ ಎಂಬಾತ ಪ್ರಕರಣ ದಾಖಲಿಸಿದ ಸಂದರ್ಭದಲ್ಲಿ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿದ್ದರೂ ಕೂಡ ಧರ್ಮಸ್ಥಳ ಪೋಲಿಸರು ಆತನನ್ನು ಗೌರವಾನ್ವಿತವಾಗಿ ಬಿಡುಗಡೆಗೊಳಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಆರೋಪಿ ಸಚಿನ್ ಕೆ.ಆರ್ ಸುಳ್ಯ ತಾಲೂಕಿನ ಸರ್ಕಾರಿ ಸ್ವಾಮ್ಯದ ರಬ್ಬರ್ ಗೋದಾಮಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ರಬ್ಬರ್ ಸೀಟುಗಳನ್ನು ಕಳವು ಮಾಡಿದ ಪ್ರಮುಖ ಆರೋಪಿಯಾಗಿದ್ದಾನೆ. ಜಾಮೀನು ರಹಿತ ಕಳವು ಪ್ರಕರಣದಲ್ಲಿ ಆರೋಪಿಯನ್ನು ಗೌರವಾನ್ವಿತವಾಗಿ ಬಿಡುಗಡೆಗೊಳಿಸಿರುವ ಧರ್ಮಸ್ಥಳ ಪೋಲಿಸರ ಕ್ರಮ ಕಳ್ಳತನಕ್ಕೆ ಪ್ರೋತ್ಸಾಹ ನೀಡಿದಂತಗಿದೆ ಎಂಬ ಆರೋಪ ಕೇಳಿ ಬಂದಿದೆ. ನೆರಿಯ ಗ್ರಾಮದಲ್ಲಿ ರಬ್ಬರ್ ಶೀಟುಗಳು ಸೇರಿದಂತೆ ಆಡು , ಗೋವುಗಳನ್ನು ಕಳವು ಮಾಡಲಾಗುತ್ತಿದ್ದು , ಇದರಲ್ಲಿ ಈತನ ಕೈವಾಡ ಇರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಧರ್ಮಸ್ಥಳ ಪೋಲಿಸರು ಕೆಲವು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಆರೋಪಿಯನ್ನು ಗೌರವಾನ್ವಿತವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದು , ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

error: Content is protected !!