ಭಜರಂಗದಳದ ಕಾರ್ಯಕರ್ತನಿಂದ ಹತ್ಯೆಗೊಳಗಾದ ಆದಿವಾಸಿ ದಿನೇಶ್ ಕುಟುಂಬಕ್ಕೆ ಪರಿಹಾರ ಧನ ಬಿಡುಗಡೆ ಮಾಡಿದ ಜಿಲ್ಲಾಡಳಿತ
ಮಂಗಳೂರು: ಭಜರಂಗದಳದ ಕಾರ್ಯಕರ್ತ , ಬಿಜೆಪಿ ಮುಖಂಡ ಕೃಷ್ಣ ಯಾನೆ ಕಿಟ್ಟ ಎಂಬಾತನಿಂದ ಹತ್ಯೆಗೊಳಗಾದ ಆದಿವಾಸಿ ಯುವಕ ಧರ್ಮಸ್ಥಳ ಗ್ರಾಮದ ಕನ್ಯಾಡಿ ದಿನೇಶ್ ಅವರ ಕುಟುಂಬಕ್ಕೆ ಪರಿಹಾರ ಧನವನ್ನು ಸೋಮವಾರ ದ.ಕ ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಮೃತ ದಿನೇಶ್ ಅವರ ಪತ್ನಿ ಕವಿತಾ ದಿನೇಶ್ ಅವರ ಕೆನರಾ ಬ್ಯಾಂಕ್ ಖಾತೆಗೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಜಂಟಿ ಖಾತೆಯಿಂದ 4,12,500 ರೂಪಾಯಿಗಳನ್ನು ಜಮೆ ಮಾಡಲಾಗಿದೆ.
ಕಳೆದ ಪೆಬ್ರವರಿ 23 ರಂದು ಕ್ಷುಲ್ಲಕ ಕಾರಣಕ್ಕಾಗಿ ಭಜರಂಗದಳದ ಕಾರ್ಯಕರ್ತ, ಬಿಜೆಪಿ ಮುಖಂಡ ಕೃಷ್ಣ ಧರ್ಮಸ್ಥಳ ಎಂಬಾತ ಆದಿವಾಸಿ ಯುವಕ ದಿನೇಶ್ ಎಂಬಾತನಿಗೆ ಸಾರ್ವಜನಿಕವಾಗಿ ಥಳಿಸಿ , ಗಂಭೀರ ಗಾಯಗೊಳಿಸಿದ್ದ. ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನೇಶ್ ಪೆಬ್ರವರಿ 25 ರಂದು ಮೃತಪಟ್ಟಿದ್ದರು. ಇದೀಗ 11 ದಿನಗಳ ಬಳಿಕ ಜಿಲ್ಲಾಡಳಿತ ಪರಿಹಾರ ಧನವನ್ನು ಸಂತ್ರಸ್ತ ಕುಟುಂಬಕ್ಕೆ ಬಿಡುಗಡೆ ಮಾಡಿದೆ.




