ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್: ಆ್ಯಡಂ ಬಿದ್ದಪ್ಪನ ಬಂಧನ
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಆ್ಯಡಂ ಬಿದ್ದಪ್ಪ ಅವರನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್, ಕೋರಿಯೋಗ್ರಾಫರ್ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಈಗ ಪೊಲೀಸರ ವಶದಲ್ಲಿದ್ದಾರೆ. ನಟಿ ಸಂಜನಾ ಗಲ್ರಾಣಿ ಹಾಗೂ ಆ್ಯಡಂ ಸ್ನೇಹಿತರಾಗಿದ್ದರು. ಕೆಲವೇ ದಿನಗಳ ಹಿಂದೆ ಸಂಜನಾಗೆ ಅಶ್ಲೀಲ ಮೆಸೇಜ್ ಗಳ ನ್ನು ಕಳಿಸಿದ್ದಾರೆ ಎಂಬ ಆರೋಪ ಆ್ಯಡಂ ಬಿದ್ದಪ್ಪ ಅವರ ಮೇಲಿದೆ.
ಈ ಕುರಿತಂತೆ ಸಂಜನಾ ನೀಡಿದ ದೂರಿನ ಆಧಾರದ ಮೇಲೆ ಇಂದಿರಾ ನಗರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಸದ್ಯ ಈ ಆರೋಪವನ್ನು ಆಡ್ಯಂ ಬಿದ್ದಪ್ಪ ಒಪ್ಪಿಕೊಂಡಿಲ್ಲ.
ಇದೇ ಫೆಬ್ರವರಿ 25ರಂದು ರಾತ್ರಿ 10ರಿಂದ 12ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಟಿ ಸಂಜನಾ ದೂರು ನೀಡಿದ್ದರು.
ದೂರಿನ ಜೊತೆಗೆ ವಾಟ್ಸಪ್ ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.




