ಉಕ್ರೇನ್: ಬಂಕರ್ ನಲ್ಲಿ ಅಡಗಿಕೊಂಡು ಅಪಾಯದ ಸ್ಥಿತಿಯಲ್ಲಿರುವ ಉಜಿರೆಯ ಹೀನಾ ಫಾತಿಮಾ
ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಿಗೇ ಅವರಿಗಿಂತ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ನಿವಾಸಿನಿ, ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರೇ ಯುದ್ಧಗ್ರಸ್ಥ ಉಕ್ರೇನ್ ನಾಡಿನಲ್ಲಿ ಪ್ರಾಣಾಪಾಯ ಎದುರಿಸುತ್ತಿರುವ ವಿದ್ಯಾರ್ಥಿನಿ.
ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ನಿನ್ನೆ ದಿನ ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ, ಉದ್ಯಮಿ ಆಬಿದ್ ಅಲಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನವೀನ್ ಸಾವಿಗೆ ಕಾರಣವಾದ ರಷ್ಯಾ ನಡೆಸಿದ ಗಂಭೀರ ಸ್ಪೋಟ ಇವರು ಇರುವ ಕಟ್ಟಡಕ್ಕಿಂತ ಕೇವಲ 100 ಮೀ. ದೂರದಲ್ಲಿ ಇತ್ತೆಂದು ತಿಳಿದುಬಂದಿದೆ. ಕಟ್ಟಡವೊಂದರ ತಳಹಂತದ ಬಂಕರ್‌ನಲ್ಲಿ ಹೀನಾ ಫಾತಿಮಾ ಸೇರಿದಂತೆ ಒಟ್ಟು 7 ಮಂದಿ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಂಡಿದ್ದರು.




