ವಿಟ್ಲದ ಎರಡು ಕಡೆ ಸರ ಕಳವು ಪ್ರಕರಣ ಬೆನ್ನಲ್ಲೇ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು:
ಸರ ಎಗರಿಸಿದ ಖದೀಮ ಬೈಕ್ ಕಳವುಗೈದು ಪರಾರಿ ಶಂಕೆ?

ವಿಟ್ಲ: ಕನ್ಯಾನ ಮತ್ತು ವಿಟ್ಲದ ಉಕ್ಕುಡ ಎಂಬಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಕಳವುಗೈದ ಘಟನೆ ಬೆನ್ನಲ್ಲೇ ಮನೆ ಸಮೀಪ ನಿಲ್ಲಿಸಿದ್ದ ಬೈಕೊಂದು ಕಳವು ನಡೆದಿರುವ ಘಟನೆ ಕನ್ಯಾನದಲ್ಲಿ ನಡೆದಿದೆ.
ಉಕ್ಕುಡ ಸಮೀಪದ ಗುಂಪಲಡ್ಕ ನಿವಾಸಿ ಕಮಲ(55) ಎಂಬವರು ಸೌಪರ್ಣಿಕ ಕ್ರಷರ್ ಸಮೀಪದ ರಸ್ತೆಯಲ್ಲಿ ತನ್ನ ಮನೆಗೆ ಮಧ್ಯಾಹ್ನ ನಡೆದು ಹೋಗುತ್ತಿದ್ದ ಸಂದರ್ಭ ಕೆಂಪು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಬಂದ ಅಪರಿಚಿತನೋರ್ವ ಮಹಿಳೆಯ 3.5ಪವನ್ ತೂಕದ ಕರಿಮಣಿಸರ ಎಗರಿಸಿ ಪರಾರಿಯಾಗಿದ್ದ. ಸ್ವಲ್ಪ ಸಮಯದ ಬಳಿಕ ವಿಟ್ಲ ಕನ್ಯಾನ ರಸ್ತೆಯ ದೇಲಂತಬೆಟ್ಟು ಸಮೀಪ ಸ್ಕೂಟರ್ ನಲ್ಲಿ ಬಂದ ನಟೋರಿಯಾಸ್ ಕಳ್ಳನೊಬ್ಬ ಮಹಿಳೆಯ ಚೈನ್ ಎಗರಿಸಿ ಪರಾರಿಯಾದ ಘಟನೆ ಸಂಭವಿಸಿತ್ತು.
ಪೊಲೀಸರು ಕಳ್ಳನನ್ನು ಬೆನ್ನಟ್ಟಿ ಬಂದಾಗ ಕಣಿಯೂರಿನಲ್ಲಿ ಸ್ಕೂಟರ್ ನಿಂದ ಬಿದ್ದು ಚೆಂಬರ್ಪು ಬೆಂಗದಪಡ್ಪು ಕಾಡಿಗೆ ಓಡಿ ಹೋಗಿ ಪರಾರಿಯಾಗಿದ್ದ. ಆ ಪ್ರದೇಶದಲ್ಲಿ ವಿಟ್ಲ ಪೊಲೀಸರು ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದರು. ಕಳ್ಳ ಪತ್ತೆಯಾಗಿಲ್ಲ. ಬಳಿಕ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ವಿಟ್ಲ ಕನ್ಯಾನ ಸಮೀಪದ ಕರೋಪಾಡಿ ಗ್ರಾಮದ ಕಬ್ಬಿನ ಮೂಲೆ ಶರೀಫ್ ಅವರ ಕೆಂಪು ಬಣ್ಣದ ಹೀರೋ ಹೊಂಡ ಪ್ಯಾಶನ್ ಪ್ರೊ ಬೈಕ್ (KA19EF 5047) ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಬೈಕ್ ನ ಬಳಿ ಇಟ್ಟಿದ್ದ ಚಪ್ಪಾಲಿ ಕೂಡಾ ಕಾಣೆಯಾಗಿದೆ.
ಸರ ಎಗರಿಸಿದ ಕಳ್ಳ ಸಾರ್ವಜನಿಕರನ್ನು ಕಂಡು ಸ್ಕೂಟರ್ ಬಿಟ್ಟು ಕಾಡಿಗೆ ಓಡಿದ್ದು, ಇದೇ ಕಳ್ಳ ಶರೀಪ್ ಅವರ ಬೈಕ್ ಕಳವುಗೈದಿರುವ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.