ದುಬೈ: ‘ಮ್ಯೂಸಿಯಂ ಆಫ್ ದಿ ಫ್ಯೂಚರ್’ ವಿಶ್ವದ ಅತ್ಯಂತ ಸುಂದರವಾದ ಕಟ್ಟಡ ಲೋಕಾರ್ಪಣೆ
ದುಬೈ: ಮುಂದಿನ ದಿನಗಳಲ್ಲಿ ಜಗತ್ತು ಹೇಗಿರಲಿದೆ ಎಂಬ ಕಲ್ಪನೆಯನ್ನು ಮೂಡಿಸುವ ಅತ್ಯಂತ ಆಧುನಿಕ ತಂತ್ರಜ್ಞಾನಗಳು ಒಳಗೊಂಡ ‘ಫ್ಯೂಚರ್ ಮ್ಯೂಸಿಯಂ’ (ಭವಿಷ್ಯದ ವಸ್ತು ಸಂಗ್ರಹಾಲಯ) ಹೊಸತನಗಳ ನಗರ ದುಬೈನಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿದೆ.

ಫ್ಯೂಚರ್ ಮ್ಯೂಸಿಯಂ ಕಟ್ಟಡವು ವಿಶ್ವದ ಅತ್ಯಂತ ಸುಂದರವಾದ ಕಟ್ಟಡ ಎಂದು ಹೇಳಲಾಗುತ್ತಿದೆ. ಏಳು ಅಂತಸ್ತಿನ ಫ್ಯೂಚರ್ ಮ್ಯೂಸಿಯಂ ಕಟ್ಟಡ ವೃತ್ತಾಕಾರದಲ್ಲಿದ್ದು ಬೆಳ್ಳಿಯ ಬಣ್ಣವನ್ನು ಹೊಂದಿದೆ. ಕಟ್ಟಡ ಹೊರಮೈ ದುಬೈನ ಆಡಳಿತಗಾರರಿಂದ ರಚಿಸಲ್ಪಟ್ಟ ಅರೆಬಿಕ್ ಕ್ಯಾಲಿಗ್ರಫಿಯಿಂದ ಅಲಂಕರಿಸಲ್ಪಟ್ಟಿದೆ. ಇದು ದುಬೈ ನಗರದ ಮುಖ್ಯ ಹೆದ್ದಾರಿಯಾದ ಶೇಖ್ ಝಾಯಿದ್ ರಸ್ತೆಯಲ್ಲಿ ತಲೆ ಎತ್ತಿ ನಿಂತಿದೆ.
ಮಂಗಳವಾರ ಸಂಜೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಯುಎಇ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್-ಮಕ್ತೂಮ್ ಕಟ್ಟಡವನ್ನು ಉದ್ಘಾಟಿಸಿದರು. ಈಗಾಗಲೇ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ, ಸಮುದ್ರ ಕಿನಾರೆಯಲ್ಲಿ ಕಟ್ಟಿರುವ ಬುರ್ಜ್ ಅಲ್ -ಅರಬ್ ಮತ್ತು ಇತ್ತೀಚಿಗೆ ಉದ್ಘಾಟನೆಗೊಂಡ ಇನ್ ಫಿನಿಟಿ ಸೇತುವೆಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ದುಬೈ ನಗರದ ಮುಕುಟಕ್ಕೆ ಫ್ಯೂಚರ್ ಮ್ಯೂಸಿಯಂ ಮತ್ತೊಂದು ಕಿರೀಟ ಪೋಣಿಸಿದಂತಾಗಿದೆ.





