ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ: ಕಾರು ಭಸ್ಮ
ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬ ತುಂಡಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಕೈಗಾರಿಕಾ ಪ್ರದೇಶದ ಟಫೆ ಕಾರ್ಖಾನೆ ಸಮೀಪದ ಎಳ್ಳುಪುರ ರಸ್ತೆಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿಂದ ಇಳಿದು ನಡೆದುಕೊಂಡೆ ಚಿಕಿತ್ಸೆಗೆ ತೆರಳಿದ್ದಾನೆ ಎನ್ನಲಾಗಿದೆ. ಬೆಂಕಿ ಹತ್ತಿಕೊಂಡಿರುವ ವಿಷಯ ತಿಳಿದ ಅಗ್ನಿ
ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಕಾರಿನ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿದ್ದು, ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ
ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯುತ್ ಕಂಬ ತುಂಡಾದ ಹಿನ್ನೆಲೆ ಕೈಗಾರಿಕಾ ಪ್ರದೇಶದ ಹಲವೆಡೆ ವಿದ್ಯುತ್ ಅಡಚಣೆ ಯುಂಟಾ ಗಿದ್ದು, ಬೆಸ್ಕಾಂ ಎಇಇ ರೋಹಿತ್ ನೇತೃತ್ವದಲ್ಲಿ ವಿದ್ಯುತ್ ಕಂಬ ಬದಲಿಸುವ ಕಾರ್ಯ ನಡೆಸಿದರು.




