ಎನ್ನೆಂಸಿ: ರೆಡ್ ಕ್ರಾಸ್ ಘಟಕದಿಂದ ‘ಅಪರಾಧ ಮುಕ್ತ ಸಮಾಜದೆಡೆ ನಮ್ಮ ನಡೆ’ ಜಾಗೃತಿ ಕಾರ್ಯಕ್ರಮ: ಕೆಟ್ಟ ಚಟಗಳಿಂದ ದೂರವಿದ್ದು, ಬೇಡದಿರುವ ಸ್ನೇಹಿತರನ್ನು ದೂರ ಇಟ್ಟಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ:ಎಸ್ ಐ ದಿಲೀಪ್
ಸುಳ್ಯ: ಪ್ರತಿಯೊಬ್ಬ ವಿದ್ಯಾರ್ಥಿಯು ಕೆಟ್ಟ ಚಟಗಳಿಂದ ದೂರವಿದ್ದು, ಬೇಡದಿರುವ ಸ್ನೇಹಿತರನ್ನು ದೂರ ಇಟ್ಟಾಗ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರು ಮಾತನಾಡುತ್ತಾ ಹೇಳಿದರು.
ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದಿಂದ ನಡೆದ ಅಪರಾಧ ಮುಕ್ತ ಸಮಾಜದೆಡೆ ನಮ್ಮ ನಡೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದು ಮಾತನಾಡಿದರು.

ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂಎಂ ವಹಿಸಿದ್ದರು. ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾಕ್ಟರ್ ಅನುರಾಧ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳ ಜ್ಞಾನ ಸಂಪಾದನೆಯ ಕಡೆಗೆ ಗಮನ ಕೊಡಬೇಕೆ ಹೊರತು ಕೆಟ್ಟ ಕೆಲಸಗಳಿಗೆ ಬಲಿ ಬೀಳಬಾರದು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಎ ಎಸ್ ಐ ಶಿವರಾಮ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯ ಹಾಗೂ ಇತರ ಕೆಟ್ಟ ಚಟಗಳಿಗೆ ಬಲಿಯಾಗದೆ ದೇಶದ ಉತ್ತಮ ಪ್ರಜೆಗಳಾಗಬೇಕು. ಭವ್ಯ ಭಾರತವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಬಾಲಚಂದ್ರ ಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ ಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಘಟಕದ ನಾಯಕರಾದ ನಿರಂಜನ್ ಕೆ ಹಾಗೂ ಲಿಮಿತಪಿ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಘ ಯು ಆರ್ ಸ್ವಾಗತಿಸಿ ಲಾವಣ್ಯ ವಂದಿಸಿದರು. ರಾಹುಲ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.





