ಸುಳ್ಯ: ಬೆಳ್ಳಾರೆಯ ಮಂಡೇಪು ಕೆಸರುಮಯ ರಸ್ತೆ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ
ಸುಳ್ಯ: ಬೆಳ್ಳಾರೆಯಿಂದ ಮುಡಾಯಿ ತೋಟ ಕಡೆಗೆ ಹೋಗುವ ರಸ್ತೆ ಮಂಡೇಪು ಎಂಬಲ್ಲಿ ಕೆಸರುಮಯವಾಗಿರುವ ರಸ್ತೆಯ ದುರಸ್ತಿ ಯಲ್ಲಿ ಎರಡನೆಯ ತರಗತಿಯ ಎರಡು ವಿದ್ಯಾರ್ಥಿಗಳ ಶ್ರಮದಾನದ ಫೋಟೋ ಅಕ್ಟೋಬರ್ 24ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಮಾಹಿತಿ ತಿಳಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಠಜೆ ಇಷ್ಟು ದೊಡ್ಡ ರಸ್ತೆಯ ಕೆಲಸದಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಗಳ ಬಳಕೆ ಎಷ್ಟು ಸರಿ? ಹಾಗೂ ಈ ಕೆಲಸಕ್ಕೆ ಮಕ್ಕಳನ್ನು ಬಳಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸುಳ್ಯ ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಸಿಡಿಪಿಓ ಕಚೇರಿಗೆ ದೂರು ನೀಡಿದ್ದರು.
ಈ ಎಲ್ಲ ಘಟನೆಗಳಿಂದ ಎಚ್ಚೆತ್ತ ಸಂಬಂಧಪಟ್ಟ ಅಧಿಕಾರಿಗಳು ಇಂದು ಸಂಜೆಯ ವೇಳೆಗೆ ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ತಂದು ನಡೆದಾಡಲು ಸಾಧ್ಯವಾಗುವ ರೀತಿಯಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದಾಗಿ ತಿಳಿದುಬಂದಿದೆ.
ಸ್ಥಳ ವೀಕ್ಷಣೆಗೆ ನ್ಯಾಯಾಧೀಶರ ದಿಗೆ ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ದನ್, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನ್ಯಾಯಾಧೀಶರು ರಸ್ತೆಯ ಪರಿಸ್ಥಿತಿಯನ್ನು ಅವಲೋಕಿಸಿ ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದುದಕ್ಕಾಗಿ ಪೋಷಕರನ್ನು ಪ್ರಶ್ನಿಸಿದರು. ಈ ವೇಳೆ “ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತಿಗೆ ಮನವಿ ನೀಡಿದ್ದರೂ, ಅವರು ಮಾಡದಿದ್ದ ಕಾರಣದಿಂದಾಗಿ ನಾವು ಶ್ರಮದಾನ ಮಾಡಿದೆವು. ಆ ವೇಳೆ ಮಕ್ಕಳು ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ” ಎಂದು ಪೋಷಕರು ತಿಳಿಸಿದರು ಎನ್ನಲಾಗಿದೆ.



ಬಳಿಕ ಗ್ರಾಮ ಪಂಚಾಯತಿಗೆ ಬಂದ ನ್ಯಾಯಾಧೀಶರು ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ರವರನ್ನು ಪ್ರಶ್ನಿಸಿ ಆ ರಸ್ತೆಯನ್ನು ದುರಸ್ತಿಪಡಿಸದ ಬಗ್ಗೆ ಕೇಸು ದಾಖಲಿಸುವುದಾಗಿ ಹೇಳಿದರೆನ್ನಲಾಗಿದೆ. ಬಳಿಕ ಬೆಳ್ಳಾರೆ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿಯೂ ಮಕ್ಕಳೊಡನೆ ಕೆಲಸ ಮಾಡಿಸಿದುದಕ್ಕಾಗಿ ಆಕ್ಷೇಪದ ಮಾತನ್ನು ಹೇಳಿದರೆನ್ನಲಾಗಿದೆ.
ಮಕ್ಕಳಿಗೆ ಹಾರೆ ನೀಡಿ ಕೆಲಸ ಮಾಡಿಸಿದ ಪೋಷಕರ ಮೇಲೆ, ರಸ್ತೆಯ ದುರಸ್ತಿ ಮಾಡಿಸದ ಪಂಚಾಯತ್ ಸದಸ್ಯ, ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಎಸ್ಸೈ ಯವರಿಗೆ ಸೂಚನೆ ನೀಡಿದರೆಂದೂ, ಆಗ ಎಸ್. ಐ.ಯವರು “ಕೇಸ್ ಮಾಡೋದು ಬೇಡ. ರಸ್ತೆ ರಿಪೇರಿ ಮಾಡಿಸುವ ಕೆಲಸ ಮಾಡಿಸೋಣ” ಎಂದು ಹೇಳಿದಾಗ ಅದಕ್ಕೆ ಒಪ್ಪಿದ ನ್ಯಾಯಾಧೀಶರು “ಇಂದು ಸಂಜೆಯೊಳಗೆ ಆ ರಸ್ತೆಯ ಕೆಸರು ನಿವಾರಿಸುವ ಕೆಲಸ ಮಾಡಿ ಅದರ ಫೋಟೋ ಸಹಿತ ವರದಿಯನ್ನು ನಮಗೆ ಸಲ್ಲಿಸಬೇಕು” ಎಂದು ನಿರ್ದೇಶನ ನೀಡಿದರು.
ಒಟ್ಟಿನಲ್ಲಿ ಎರಡನೇ ತರಗತಿಯ ಓದುವ ಇಬ್ಬರು ಮಕ್ಕಳು ಮಾಡಿದ ಶ್ರಮದಾನದ ಕಾರ್ಯ ಇಲಾಖಾಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ.




