ಮೇಕೆದಾಟು ಪಾದಯಾತ್ರೆಯ ಘಟನೆಯ ಬಗ್ಗೆ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯಿಸಿದ್ದು ಹೀಗೆ….
ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮೊದಲಾದ ಪ್ರಮುಖ ನಾಯಕರು ನಡೆದುಕೊಂಡು ಹೋಗುತ್ತಿರುವಾಗ ಅಡ್ಡಬಂದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ನನ್ನು ಡಿ ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದು ಭಾರೀ ಸುದ್ದಿಯಾಗಿದೆ.
ಈ ಬಗ್ಗೆ ಸ್ವತಃ ಮೊಹಮ್ಮದ್ ನಲಪಾಡ್ ಫೇಸ್ ಬುಕ್ ಲೈವ್ ಮೂಲಕ ಬಂದು ಸ್ಥಳದಲ್ಲಿ ಏನು ನಡೆಯಿತು, ಡಿ ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದೇಕೆ ಎಂದು ವಿವರಿಸಿದ್ದಾರೆ. ಈ ಮೂಲಕ ಈ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿದವರಿಗೆ, ವಿಡಿಯೊ ನೋಡಿದವರಿಗೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.
ನೀರಿಗಾಗಿ, ಬೆಂಗಳೂರು ಜನತೆಗೆ ಕುಡಿಯುವ ನೀರಿಗಾಗಿ ಹೋರಾಟದಲ್ಲಿ ನಾವೆಲ್ಲರೂ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿದ್ದೇವೆ. ಈ ಸಂದರ್ಭದಲ್ಲಿ ನೂರಾರು ಕೈ ಕಾರ್ಯಕರ್ತರು ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆಯವರ ಬಳಿಗೆ ಹೋಗಿ ಫೋಟೋ ತೆಗೆದುಕೊಳ್ಳಲು ನೋಡುವುದು ಸಹಜ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಾಯಕನಾಗಿ ನಮ್ಮ ನಾಯಕರನ್ನು ಕಾಪಾಡುವುದು ನನ್ನ ಕರ್ತವ್ಯ.
ಪಾದಯಾತ್ರೆ ಆರಂಭವಾದ ನಂತರ ನಡಿಗೆ ವೇಳೆ ನಾಯಕರ ಬಳಿ ಬಂದ ಕಾರ್ಯಕರ್ತರನ್ನು ತಳ್ಳಿಹಾಕಿದ, ಬಿಸಾಕಿದ ಎಂದು ನನ್ನ ಮೇಲೆ ಮಾಧ್ಯಮಗಳಲ್ಲಿ, ಅಲ್ಲಲ್ಲಿ ಆರೋಪಗಳು ಬರುತ್ತಿವೆ. ನಮ್ಮ ನಾಯಕರ ಮೈ ಮೇಲೆ ಬಿದ್ದರೆ, ತಳ್ಳಾಡಿದರೆ ಅವರಿಗೆ ನಡೆಯಲು ಆಗುವುದಿಲ್ಲ, ಸಮಸ್ಯೆಯಾಗುತ್ತದೆ, ಹೀಗಾಗಿ ದೂರ ಹೋಗಲು ಹೇಳುತ್ತೇವೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.




