‘ಬಸವ ಮಂಟಪ’ ಕೃತಿ ವಿವಾದ: ರವಿ ಹಂಜ್’ಗೆ ನಿರೀಕ್ಷಣಾ ಜಾಮೀನು
ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಹಾಗೂ ಅವರ ವಚನಗಳನ್ನು ಅವಮಾನಿಸಿದ ಆರೋಪ ಎದುರಿಸುತ್ತಿದ್ದ ವಿವಾದಾತ್ಮಕ ‘ಬಸವ ಮಂಟಪ’ ಕೃತಿ ಲೇಖಕ, ಅನಿವಾಸಿ ಭಾರತೀಯ, ದಾವಣಗೆರೆ ಮೂಲದ ರವಿ ಹಂಜಗಿಮಠ್(ರವಿ ಹಂಜ್) ಅವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಬಂಧನ ಭೀತಿಯಲ್ಲಿದ್ದ ರವಿ ಹಂಜ್ ಅವರು ನಿರೀಕ್ಷಣಾ ಜಾಮೀನು ಕೋರಿ 56ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ್ ಪ್ರಭು ಅವರು, ಲೇಖಕ ರವಿ ಹಂಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದ್ದಾರೆ.
ರವಿ ಹಂಜ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಎರಡು ವರ್ಷಗಳಿಂದ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗುತ್ತಿತ್ತು. ಆಗ ಲೇಖನಗಳಿಗೆ ಯಾರು ಅಕ್ಷೇಪಣೆ ಸಲ್ಲಿಸಲಿರಲಿಲ್ಲ. ಈಗ ಅದೇ ಲೇಖನ ಪುಸ್ತಕ ಆದಾಗ ದೂರು ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ದೂರು ಎಂದು ವಾದಿಸಿದ್ದಾರೆ.
ಈ ವೇಳೆ ಯಾರು ಯಾರ ಬಗ್ಗೆ ಹೇಗಾದ್ರೂ ಪುಸ್ತಕ ಬರೆಯಬಹುದೇ, ಬೇರೆಯವರ ಭಾವನೆಗೆ ಧಕ್ಕೆ ತರಬಹುದೇ ಅಂತ ನ್ಯಾಯಾಧೀಶ ಮೋಹನ್ ಅವರು, ರವಿ ಹಂಜ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ನಂತರ ಎರಡು ಕಡೆ ವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.




