November 26, 2026

ಮಂಗಳೂರು: ಜಾಲದಲ್ಲಿ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ: ಸಿಬ್ಬಂದಿ ಸೆರೆ, 2 ಕೋಟಿ ರೂ. ಮೌಲ್ಯದ ಚಿನ್ನ, 73 ಲಕ್ಷ ರೂ. ನಗದು ವಶ

0
image_editor_output_image-726244554-1795664943272

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಶಾಮೀಲಾಗಿದ್ದ ಬೃಹತ್ ಚಿನ್ನ ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಮಂಗಳೂರು ಪ್ರಾದೇಶಿಕ ಘಟಕ ಭೇದಿಸಿದೆ.

ಕಾರ್ಯಾಚರಣೆಯಲ್ಲಿ ಅಂದಾಜು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ ವಿದೇಶಿ ಚಿನ್ನ ಹಾಗೂ 73 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ದುಬೈ ಮತ್ತು ಕಾಸರಗೋಡು ಮೂಲದ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿ ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಚಿನ್ನ ಕಳ್ಳಸಾಗಣೆಗೆ ಸಹಕರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ, ಡಿಆರ್‌ಐ ಅಧಿಕಾರಿಗಳು ಆಗಮನ ವಿಭಾಗದಲ್ಲಿ ತೀವ್ರ ನಿಗಾ ಇರಿಸಿದ್ದರು.

ಯುಎಇಯಿಂದ ಆಗಮಿಸುವ ಅಪರಿಚಿತ ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಲ್ಲಿ ಬಚ್ಚಿಡುತ್ತಿದ್ದ ಚಿನ್ನವನ್ನು ಈ ಸಿಬ್ಬಂದಿ ಹೊರತೆಗೆದು ಸಾಗಿಸುತ್ತಿದ್ದರು ಎನ್ನಲಾಗಿದೆ.

ನವೆಂಬರ್ 23ರ ಬೆಳಿಗ್ಗೆ ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಿಂದ ಚಿನ್ನವನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಹೊರಗುತ್ತಿಗೆ ಸಿಬ್ಬಂದಿಯನ್ನು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತನ ಬಳಿಯಿದ್ದ ಪೇಸ್ಟ್ ರೂಪದ ಚಿನ್ನ ತುಂಬಿದ್ದ ಎರಡು ಆಯತಾಕಾರದ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಕ್ಷಣವೇ ಮುಂದುವರಿದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎರಡನೇ ಮತ್ತು ಮೂರನೇ ಆರೋಪಿಗಳನ್ನು ಬಂಧಿಸಿದ್ದು, ತಪಾಸಣೆ ವೇಳೆ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ 73 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ 2 ಕೋಟಿ ರೂ. ಮೌಲ್ಯದ 1.65 ಕೆ.ಜಿ ಚಿನ್ನ, 7 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಮೂವರು ಆರೋಪಿಗಳನ್ನು ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 7, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!