November 26, 2026

ಸೌಜನ್ಯಾ ಪ್ರಕರಣದಲ್ಲಿ ವೈಜ್ಞಾನಿಕ ದಾಖಲೆಗಳ ಆಧಾರದಲ್ಲೇ ತನಿಖೆ: ಸಚಿವ ಪ್ರಿಯಾಂಕ್ ಖರ್ಗೆ

0
image_editor_output_image-748409058-1795664638362

ಮಂಗಳೂರು: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣವು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಯಾರಿಗೂ ಅನ್ಯಾಯವಾಗದಂತೆ ವೈಜ್ಞಾನಿಕ ದಾಖಲೆಗಳ ಆಧಾರದಲ್ಲೇ ತನಿಖೆ ನಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬುಧವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೌಜನ್ಯಾ ಪ್ರಕರಣದ ಮರುತನಿಖೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತನಿಖಾಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಪ್ರಕರಣ ನಡೆದು ಸುಮಾರು 14 ವರ್ಷಗಳು ಕಳೆದಿರುವುದರಿಂದ ಸತ್ಯ ತಿಳಿದುಕೊಳ್ಳಲು ವೈಜ್ಞಾನಿಕ ದಾಖಲೆಗಳ ಆಧಾರ ಅತ್ಯಗತ್ಯ. ಹಲವರು ನನಗೆ ಪತ್ರ ಬರೆದು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ತಿಳಿಸಿದ್ದು, ಅವುಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ’’ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸಾಮಾಜಿಕ ಜಾಲತಾಣಗಳ ಅತಿರೇಕದ ವರದಿಗಾರಿಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ‘‘ಇಂದು ಕೆಲವು ಯೂಟ್ಯೂಬ್ ಚಾನೆಲ್‌ಗಳೇ ಪ್ರಕರಣದ ಎಲ್ಲಾ ತೀರ್ಮಾನಗಳನ್ನು ಮಾಡುತ್ತಿರುವಂತಿದೆ. ಅವರಿಗೆ ಮಾಹಿತಿ ಎಲ್ಲಿಂದ ಬರುತ್ತದೆ ಎಂಬುದೇ ತಿಳಿಯುತ್ತಿಲ್ಲ. ಮಿರ್ಚಿ-ಮಸಾಲೆ ಸೇರಿಸಿ ಸುಳ್ಳು ಸುದ್ದಿ ಹಾಗೂ ಕಟ್ಟುಕಥೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು’’ ಎಂದು ಕಿವಿಮಾತು ಹೇಳಿದರು.

‘ಯೂಟ್ಯೂಬ್‌ನಲ್ಲಿ ಅಧಿಕೃತ ಹಾಗೂ ಪ್ರಬುದ್ಧ ಪತ್ರಕರ್ತರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬೇಕಾಬಿಟ್ಟಿ ಸುದ್ದಿ ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್‌ಗಳನ್ನು ನಿಯಂತ್ರಿಸಲು ಸೂಕ್ತ ನೀತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಐಟಿ ಸಚಿವಾಲಯದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ’’ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಕರ್ನಾಟಕದ ಮೀನುಗಾರರ ಮೇಲೆ ನೆರೆಯ ರಾಜ್ಯಗಳಿಂದ ದೌರ್ಜನ್ಯ ನಡೆಯುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ‘‘ಬೇರೆಯವರ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. 12 ನಾಟಿಕಲ್ ಮೈಲುಗಳ ಸಮುದ್ರ ವ್ಯಾಪ್ತಿ ನಮ್ಮ ನಿಗಾದಲ್ಲಿದೆ. ನೆರೆಯ ಕೇರಳ ಮತ್ತು ಗೋವಾ ರಾಜ್ಯಗಳಿಂದ ನಮ್ಮ ಮೀನುಗಾರರಿಗೆ ಶೋಷಣೆಯಾಗುತ್ತಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸಲು ಸರ್ಕಾರ ಸಿದ್ಧವಿದೆ’’ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!