ಬಂಟ್ವಾಳ: ಆದಿವಾಸಿ ಕೊರಗ ಸಮುದಾಯದ ಮೇಲೆ ಪೋಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಬಂಟ್ವಾಳ: ಉಡುಪಿ ಜಿಲ್ಲೆಯ ಕೋಟಾದಲ್ಲಿ ಇತ್ತೀಚೆಗೆ ಆದಿವಾಸಿ ಕೊರಗ ಸಮುದಾಯದವರು ಮೆಹಂದಿ ಕಾರ್ಯಕ್ರಮ ದಲ್ಲಿ ಡಿ.ಜೆ ಅಳವಡಿಸಿರುವುದಕ್ಕೆ ಪೋಲೀಸರು ಕೊರಗ ಸಮುದಾಯದ ಮೇಲೆ ಮಾರಣಾಂತಿಕ ರೀತಿಯಲ್ಲಿ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಇಂದು ಬಿ.ಸಿ.ರೋಡ್ ನಲ್ಲಿ ಪ್ರಗತಿಪರ ಹಾಗೂ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಸಿ.ಪಿ.ಐ.ಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಬಿ.ಜೆ.ಪಿ ಸರಕಾರದ ಆಡಳಿತದಲ್ಲಿ ದಿನ ನಿತ್ಯ ದಲಿತರ ಮೇಲೆ ದಾಳಿಯಾಗುತ್ತಿದ್ದು ಈಗ ಪೋಲೀಸರ ಮೂಲಕ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಪೋಲೀಸ್ ಇಲಾಖೆ ಸಂಘಪರಿವಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ದಲಿತ ಸಮುದಾಯದವರು ಇಂದು ಶಿಕ್ಷಿತರಾಗಿ ಸಂಭ್ರಮದಿಂದ ಮದುವೆ ಕಾರ್ಯಕ್ರಮ ವನ್ನು ಮಾಡುವುದನ್ನು ಸಹಿಸದ ಮೇಲ್ವರ್ಗ ದವರು ಪೋಲೀಸರ ಮುಖಾಂತರ ದಲಿತರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಂದು ಪೋಲೀಸರ ಕಣ್ಣೆದುರೇ ಕಾನೂನು ಬಾಹಿರ ಚಟುವಟಿಕೆ ಗಳು ನಡೆಯುತ್ತಿದ್ದರೂ ಪೋಲೀಸರು ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ. ಕಾನೂನು ರಕ್ಷಿಸಬೇಕಾದ ಪೋಲಿಸರು ಈ ದೇಶದ ಕಾನೂನಿಗೆ ವಿರುದ್ದವಾಗಿ ವರ್ತಿಸುತ್ತಿದ್ದು ಬಿ.ಜೆ.ಪಿ ಪಕ್ಷವನ್ನು ಮೆಚ್ಚಿಸಲು ನಿರಂತರವಾಗಿ ಇಂತಹ ದೌರ್ಜನ್ಯ ನಡೆಸುತ್ತಿದ್ದು ಪೋಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಹಿಂದೂ ಒಂದು ಎನ್ನುವ ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ದಲಿತ ಸಮುದಾಯದ ಸಚಿವ ಅಂಗಾರ ಈ ಬಗ್ಗೆ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಕರಣ ವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎ.ಐ.ಟಿ.ಯು.ಸಿ ಜಿಲ್ಲಾ ಮುಖಂಡರಾದ ಬಿ.ಶೇಖರ್ ಮಾತನಾಡಿ ಬಿ.ಜೆ.ಪಿ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಾಗಿ ಹದಗೆಟ್ಟಿದ್ದು ಕೊರಗ ಸಮುದಾಯದ ಮೇಲೆ ದೌರ್ಜನ್ಯ ನಡೆಸಿದ ಪೋಲಿಸರ ಮೇಲೆ ಕ್ರಮ ಕೈಗೊಳ್ಳುವ ಬದಲು ದೌರ್ಜನ್ಯಕ್ಕೆ ಒಳಗಾದವರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ದೌರ್ಜನ್ಯಕ್ಕೆ ಒಳಗಾದವರ ದ್ವನಿಯನ್ನು ಹತ್ತಿಕ್ಕಲು ಈ ರೀತಿ ಅವರ ಮೇಲೆಯೇ ಪ್ರಕರಣ ದಾಖಲಿಸಿ ಪರಿಹಾರದ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ಯುವ ವೇದಿಕೆಯ ಮುಖಂಡರಾದ ಸತೀಶ್ ಅರಳ ಮಾತನಾಡಿ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು ಸಂವಿಧಾನ ಬದ್ದವಾಗಿ ಕೆಲಸಮಾಡಬೇಕಾದ ಪೋಲಿಸರು ಮನುವಾದಿಗಳ ಅಣತಿಯಂತೆ ಕಾರ್ಯನಿರ್ವಹಿಸಿತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆ ಯಲ್ಲಿ ಸಾಮಾಜಿಕ ಕಾರ್ಯಕರ್ತ ರಾದ ರಾಜಾ ಚೆಂಡ್ತಿಮಾರ್, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಅದ್ಯಕ್ಷರಾದ ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಜೆ.ಡಿ.ಎಸ್ ಮುಖಂಡರಾದ ಹಾರೂನ್ ರಶೀದ್, ಸಿ.ಪಿ.ಐ.ಎಂ ಬಂಟ್ವಾಳ ತಾಲೂಕು ಸಮಿತಿ ಸದಸ್ಯರಾದ ಉದಯ ಕುಮಾರ್ ಬಂಟ್ವಾಳ,ದಿನೇಶ ಆಚಾರಿ, ಪ್ರಜಾಪರಿವರ್ತನಾ ವೇದಿಕೆಯ ಕೃಷ್ಣಪ್ಪ ಪುದ್ದೊಟ್ಟು, ಬಿ.ಟಿ.ಕುಮಾರ್, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ರಾದ ಸುರೇಂದ್ರ ಕೋಟ್ಯಾನ್, ಮುಖಂಡರಾದ ಉಮೇಶ್ ವಾಮದಪದವು, ಖಲೀಲ್ ಬಾಪು, ಕಾರ್ಮಿಕ ಮುಖಂಡರಾದ ಲಿಯಕತ್ ಖಾನ್,ನಾರಾಯಣ ಪೊಯಿಲೋಡಿ, ಹನೀಫ್ ಬೋಳಂತೂರು, ದಲಿತ ಸಂಘಟನೆಯ ಮುಖಂಡರಾದ ನಾರಾಯಣ ನಂದಾವರ ಮುಂತಾದವರು ಭಾಗವಹಿಸಿದ್ದರು.
ಪ್ರತಿಭಟನೆಯ ಆರಂಭದಲ್ಲಿ ಎ.ಐ.ವೈ.ಎಫ್. ಮುಖಂಡರಾದ ಸುರೇಶ್ ಕುಮಾರ್ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊನೆಯಲ್ಲಿ ನ್ಯಾಯವಾದಿ ತುಳಸೀದಾಸ್ ವಿಟ್ಲ ಧನ್ಯವಾದ ಸಲ್ಲಿಸಿದರು




