November 20, 2026

ಕಣಚೂರು ಕಾಲೇಜ್ ಆವರಣದಿಂದ ವಿದ್ಯಾರ್ಥಿನಿಯ ಅಪಹರಣ ಪ್ರಕರಣ: ಕೇರಳದಲ್ಲಿ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿದ ಪೊಲೀಸರು: ಕುಟುಂಬದ ಜತೆ ತೆರಳಲು ನಿರಾಕರಿಸಿದ ವಿದ್ಯಾರ್ಥಿನಿ

0
image_editor_output_image-1069129439-1795171699537

ಮಂಗಳೂರು,: ನಗರದ ಹೊರವಲಯದ ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಆವರಣದಿಂದ ಯುವತಿಯೊಬ್ಬಳನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದಲ್ಲಿದ್ದ ಯುವತಿಯನ್ನು ಉಳ್ಳಾಲ ಪೊಲೀಸರು ರಕ್ಷಿಸಿದ್ದಾರೆ.

ಯುವತಿಯನ್ನು ಕೇರಳದಲ್ಲಿರುವ ಆಕೆಯ ಸಂಬಂಧಿಕರ ಮನೆಯಿಂದ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ವೇಳೆ ತಾನು ಕುಟುಂಬದವರೊಂದಿಗೆ ತೆರಳಲು ಇಚ್ಛಿಸುವುದಿಲ್ಲ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ಬಳಿಕ ಆಕೆಯ ಇಚ್ಛೆಯಂತೆ ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ಅಥವಾ ಪೊಲೀಸ್ ರಕ್ಷಣೆಯಲ್ಲಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲು ಪೊಲೀಸರು ನಿರ್ಧರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ (BNSS) ಪ್ರಕಾರ ನೋಟಿಸ್ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಯುವತಿಯನ್ನು ಬಲವಂತವಾಗಿ ಕರೆದೊಯ್ದು ಬಂಧನದಲ್ಲಿಡುವ ಆರೋಪ ಮುಂದುವರಿದಿದೆ.

ಹಿನ್ನೆಲೆ: ಕಣಚೂರು ಮೆಡಿಕಲ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆಕೆಯ ಸಂಬಂಧಿಕರು ಕಾಲೇಜು ಆವರಣದಿಂದಲೇ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಾಯಪ್ರಬುದ್ಧ ಯುವತಿ ತನ್ನ ಇಚ್ಛೆಯಂತೆ ಜೀವನ ನಡೆಸುವ ಹಕ್ಕು ಹೊಂದಿದ್ದಾಳೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಈ ಹಿಂದೆ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!