February 1, 2026

ಉಪ್ಪಿನಂಗಡಿ: ಸಾರ್ವಜನಿಕ “ಮಸ್ಜಿದ್ ದರ್ಶನ್” ಕಾರ್ಯಕ್ರಮ

0
IMG-20220102-WA0067.jpg

ಉಪ್ಪಿನಂಗಡಿ: ಸಮಾಜದಲ್ಲಿ ವಿವಿಧ ಧರ್ಮೀಯರ ಮಧ್ಯೆ ಸೌಹಾರ್ದದ ಕೊಂಡಿಯನ್ನು ಇನ್ನಷ್ಟು ಬಲಿಷ್ಟವಾಗಿಸುವ ನಿಟ್ಟಿನಲ್ಲಿ, ವಿವಿಧ ಧರ್ಮಗಳ ಬಗ್ಗೆ ಪರಸ್ಪರ ಅರಿಯುವ, ತಿಳಿಯುವ ಪ್ರಯತ್ನ ನಡೆಯಬೇಕು ಎನ್ನುವ ಉದ್ದೇಶದಿಂದ 34-ನೆಕ್ಕಿಲಾಡಿಯಲ್ಲಿರುವ ಮಸ್ಜಿದುಲ್ ಹುದಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾದ “ನಮ್ಮೂರ ಮಸೀದಿ ನೋಡ ಬನ್ನಿ” ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ “ಮಸ್ಜಿದ್ ದರ್ಶನ್” ಕಾರ್ಯಕ್ರಮ ಜ. 2ರಂದು ನಡೆಯಿತು.

ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಮಸೀದಿಯೊಳಗೆ ಪ್ರವೇಶ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಸಾಮರಸ್ಯಕ್ಕೆ ಯಾವತ್ತೂ ಧರ್ಮ ಅಡ್ಡಿ ಆಗಬಾರದು ಹಾಗೂ ಸಾಮರಸ್ಯ ಧರ್ಮದಿಂದ ನಿರ್ಮಿತ ಆಗಬಾರದು, ನಾವು ಒಳ್ಳೆಯ ಮನಸ್ಸಿನಿಂದ ಹತ್ತಿರ ಆಗಬೇಕಾಗಿದ್ದು, ಸಮಾಜದಲ್ಲಿ ವಿವಿಧ ಧರ್ಮೀಯರ ಮಧ್ಯೆ ಪರಸ್ಪರ ಪ್ರೀತಿ, ವಿಶ್ವಾಸ ಸದೃಢವಾಗಬೇಕು. ಸಮಾಜದಲ್ಲಿ ಸೌಹಾರ್ದ ವಾತಾವರಣ ಬೆಳೆದು ಬರಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಹೇಳಿದರು.

ತೊಕ್ಕೊಟ್ಟು ಮಸ್ಜಿದುಲ್ ಹುದಾ ಮಸೀದಿಯ ಖತೀಬ್ ಮಹಮ್ಮದ್ ಕುಂಞಿ ಮಾತನಾಡಿ ಸಮಾಜದಲ್ಲಿ ಅಪರಿಚಿತ, ಅಪನಂಬಿಕೆ ಹೋಗಲಾಡಿಸುವುದು ಪವಿತ್ರವಾದ ಕೆಲಸವಾಗಿದ್ದು, ಮಸೀದಿ, ಮದ್ರಸಗಳ ಬಗ್ಗೆ ತಪ್ಪು ಕಲ್ಪನೆಗಳಿವೆ. ಧರ್ಮಗಳ ಸಿದ್ದಾಂತವನ್ನು ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸುವ ಮೂಲಕ ಸಾಮರಸ್ಯವನ್ನು ಇನ್ನಷ್ಟು ಬೆಳೆಸಲು ನಾವು ಈ ಕಾರ್ಯಕ್ರಮವನ್ನು ರೂಪಿಸಿದ್ದು, ಆ ಮೂಲಕ ಸಮಾಜದಲ್ಲಿ ಆರೋಗ್ಯಕರ ಬದಲಾವಣೆ ಆಗುವುದಕ್ಕೆ ನಾವುಗಳು ಪರಸ್ಪರ ಕೈಜೋಡಿಸಬೇಕಾಗಿದೆ ಎಂದರು. 

ಯುವ ವಾಹಿನಿ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ. ಮಾತನಾಡಿ ನನಗೇನು ಇದು ಹೊಸತನದ ಪರಿಕಲ್ಪನೆ ಅಂತ ತೋಚುತ್ತಿಲ್ಲ, ನಾನು ಚಿಕ್ಕವನಿರುವಾಗ ಮುಸ್ಲಿಂ ಕುಟುಂಬಗಳ ಜೊತೆಗೆ ಸೌಹಾರ್ದತೆಯ ಸಂಬಂಧ ಇರಿಸಿಕೊಂಡು ಬೆಳೆದವನು. ನಮ್ಮ ಮನೆಯಿಂದ ಅಜಿಲಮೊಗರು ಪಳ್ಳಿಶೇಕ್‍ಗೆ ಹರಕೆ ಸಂದಾಯ ಆಗುತ್ತಿತ್ತು, ಹಾಗೆಯೇ ಆ ಭಾಗದ ಮುಸ್ಲಿಮರು ದೇವಸ್ಥಾನ, ದೈವದ ಗುಡಿಗೂ ತೆಂಗಿನ ಕಾಯಿಯನ್ನು ಕೊಡುತ್ತಿದ್ದರು. ಆದರೆ ಇದೀಗ ಬದಲಾಗುವ ಕಂದಕ, ಕಾರ್ಮೋಡಗಳು ಬದಿಗೆ ಸರಿಯುವಂತಾಗಲು ಇಂತಹ ಕಾರ್ಯಕ್ರಮ ನಡೆಯುವುದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು.

ಮಸ್ಜಿದುಲ್ ಹುದಾ ಗೌರವ ಅಧ್ಯಕ್ಷ ಡಾ. ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮ ಧರ್ಮಗಳ ನಡುವೆ ಸಮಸ್ಯೆ ಇಲ್ಲ, ಧರ್ಮಗಳ ಸಿದ್ಧಾಂತಗಳ ಸಂದೇಶವನ್ನು ತಿಳಿಯದೆ ಸಮಸ್ಯೆ ಎದುರಾಗುತ್ತಿದೆ. ಅಪನಂಬಿಕೆಗಳನ್ನು ದೂರ ಮಾಡಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು. 

ಉಪ್ಪಿನಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ, ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ ಮಾತನಾಡಿ, ನನ್ನ ಬಾಳಿನಲ್ಲಿ ಇದೊಂದು ಅವಿಸ್ಮರಣೀಯ ದಿನವಾಗಿದ್ದು, ನಾನು ಅಜ್ಮೀರ್, ದೆಹಲಿಯ ಜಾಮಿಯಾ ಮಸೀದಿಯ ಒಳಗೆ ಪ್ರವೇಶ ಮಾಡಿದ್ದೇನೆ. ಅದು ಕೇವಲ ಪ್ರವಾಸಿಗನಾಗಿ ಹೋಗಿದ್ದೆ, ಆದರೆ ಇಂದು ಇಂದು ಮಸೀದಿಯ ಬಗ್ಗೆ ತಿಳಿಯುವಂತಾಯಿತು. ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ಬಾಂಧವ್ಯ ವೃದ್ಧಿಸಲು ಇದು ಸಹಕಾರಿ ಆಗಲಿ ಎಂದು ಹಾರೈಸಿದರು.

ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಸಯ್ಯದ್ ಯಹ್ಯಾ ತಂಙಳ್ ಮದನಿ ಮಾತನಾಡಿ, ಧರ್ಮದ ಸಾರವನ್ನು ಪರಸ್ಪರ ಭೇಟಿಯಾಗಿ ತಿಳಿದುಕೊಳ್ಳಬೇಕು ಮತ್ತು ತಿಳಿಸಿ ಹೇಳುವ ಕೆಲಸ ಆಗಬೇಕು. ಈ ಕೊರತೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೀಗಿಸಬೇಕಾಗಿದೆ ಎಂದರು.

ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ರಘು ಬೆಳ್ಳಿಪ್ಪಾಡಿ ಮಾತನಾಡಿ ಸಮಾಜದಲ್ಲಿರುವ ಅಪನಂಬಿಕೆಯನ್ನು ದೂರ ಮಾಡಲು ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಇದು ಇನ್ನಷ್ಟು ಕಡೆ ನಡೆಯಲಿ ಎಂದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಎ. ಕೃಷ್ಣ ರಾವ್ ಅರ್ತಿಲ, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ರೈತ ಬಂಧು ಸಂಸ್ಥೆಯ ಶಿವಶಂಕರ್ ನಾಯಕ್, ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಜತೀಂದ್ರ ಶೆಟ್ಟಿ, ಉಪ್ಪಿನಂಗಡಿ ದಾರು ತೌಹೀದ್ ಜುಮಾ ಮಸೀದಿ ಖತೀಬ್ ಮುಫ್ತಿ ಕಲೀಮುದ್ದೀನ್ ಸಂದರ್ಭೋಚಿತವಾಗಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಜಮಾಅತೆ ಇಸ್ಲಾಂ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಲ್ ಸಲಾಂ, ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ನೆಕ್ಕಿಲಾಡಿ ಮಸ್ಜಿದುಲ್ ಹುದಾ ಅಧ್ಯಕ್ಷ ಯು.ಕೆ. ಇಲ್ಯಾಸ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನೀರಜ್ ಕುಮಾರ್, ಪದಾಧಿಕಾರಿಗಳಾದ ರವೀಂದ್ರ ದರ್ಬೆ, ವಿಜಯಕುಮಾರ್ ಕಲ್ಲಳಿಕೆ, ಜಗದೀಶ್ ನಾಯಕ್, ಅಜೀಜ್ ಬಸ್ತಿಕ್ಕಾರ್, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಹರೀಶ್, ಮಾಜಿ ಅಧ್ಯಕ್ಷ ಶೇಕಬ್ಬ ಹಾಜಿ, ಮಾಜಿ ಉಪಾಧ್ಯಕ್ಷ ಅಸ್ಕರ್ ಆಲಿ, ಕೋಡಿಂಬಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಯಪ್ರಕಾಶ್ ಬದಿನಾರು, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಗೌಡ, ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಅನಿ ಮೆನೇಜಸ್, ಯಶೋಧ, ಉದ್ಯಮಿ ವರದರಾಜ, ಮಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ಮಸ್ಜಿದ್ ದರ್ಶನ್ ಕಾರ್ಯಕ್ರಮ ಸಮಿತಿ ಸಂಚಾಲಕ ಅಮೀನ್ ಅಹ್ಸನ್ ಸ್ವಾಗತಿಸಿ, ಉಪ್ಪಿನಂಗಡಿ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಹಸೀಬ್ ವಂದಿಸಿದರು. ಇಸ್ಮಾಯಿಲ್ ಇಕ್ಬಾಲ್, ಅಬ್ದುಲ್ ರಹಿಮಾನ್ ಮೌಲವಿ, ಅಬ್ದುಲ್ ರಜಾಕ್ ಸೀಮಾ, ಅಬ್ದುಲ್ ಸಲಾಂ, ಅಬ್ದುಲ್ ರವೂಫ್, ಅಬ್ದುಲ್ ಆಶಿಫ್, ಸಲೀಂ ಬೋಳಂಗಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನೆಕ್ಕಿಲಾಡಿ ಮಸ್ಜಿದುಲ್ ಹುದಾ ಕಾರ್ಯದರ್ಶಿ ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!