October 13, 2026

ಸುಲ್ತಾನ್ ಬತ್ತೇರಿಯಲ್ಲಿ ಪ್ರವಾಸಿ ವ್ಯಾನ್, ಲಾರಿ ಭೀಕರ ಅಪಘಾತ: ಇಬ್ಬರು ಮೃತಪಟ್ಟು, 13 ವಿದ್ಯಾರ್ಥಿಗಳು ಗಂಭೀರ

0
image_editor_output_image-2042065444-1791875228888

ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ಸಮೀಪ ಮಂಡ್ಯ ವಿಶ್ವವಿದ್ಯಾಲಯದ ಸ್ನಾತಕೋತ್ತರ (PG) ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಪ್ರವಾಸಿ ವ್ಯಾನ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, 13 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಅಕ್ಟೋಬರ್ 12-13ರ ಮಧ್ಯರಾತ್ರಿ ಸುಲ್ತಾನ್ ಬತ್ತೇರಿಯ 54ನೇ ಮೈಲಿ (ಕೊಲಗಪ್ಪರ) ಬಳಿ ಈ ದುರ್ಘಟನೆ ಸಂಭವಿಸಿದೆ.

 

ಅಪಘಾತದಲ್ಲಿ ಮೈಸೂರು ಮೂಲದ ಟೆಂಪೋ ಟ್ರಾವೆಲರ್ ಚಾಲಕ ರಂಜಿತ್ (40) ಹಾಗೂ ಅಡುಗೆಯವರಾದ ಭರತ್ (22) ಮೃತಪಟ್ಟಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯದ 13 ಮಂದಿ ವಿದ್ಯಾರ್ಥಿಗಳು ಕೇರಳದ ಪ್ರಸಿದ್ಧ ಪ್ರವಾಸಿ ತಾಣ ಮುನ್ನಾರ್‌ಗೆ ಅಧ್ಯಯನ ಪ್ರವಾಸ ಮುಗಿಸಿಕೊಂಡು ವಾಪಸ್ ಮಂಡ್ಯಕ್ಕೆ ಹಿಂತಿರುಗುತ್ತಿದ್ದಾಗ ಈ ದುರಂತ ಎದುರಾಗಿದೆ.

ಎದುರಿನಿಂದ ಬಂದ ಲಾರಿಗೆ ಮುಖಾಮುಖಿ ಢಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಗಳಿದ್ದ ಪ್ರವಾಸಿ ವ್ಯಾನ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿಗೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ವಾಹನದ ಬಾಗಿಲುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಲಾಕ್ ಆಗಿದ್ದರಿಂದ ಗಾಯಗೊಂಡ ವಿದ್ಯಾರ್ಥಿಗಳು ಹೊರಬರಲಾಗದೆ ಒಳಗೆಯೇ ಸಿಲುಕಿಕೊಂಡು ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅತ್ಯಾಧುನಿಕ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ವಾಹನದ ಬಿಡಿಭಾಗಗಳನ್ನು ಕತ್ತರಿಸಿ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸುಲ್ತಾನ್ ಬತ್ತೇರಿ ಆಸ್ಪತ್ರೆಗೆ ರವಾನಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಯನಾಡ್‌ನ ಮೇಪ್ಪಾಡಿಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ 13 ವಿದ್ಯಾರ್ಥಿಗಳಲ್ಲಿ ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!